ಶಿಕ್ಷಣ, ರಾಜಕೀಯ, ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶ । ಡಿಸಿಎಂ ಡಾ.ಜಿ. ಪರಮೇಶ್ವರ್ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಬಲಗೈ ಸಮುದಾಯವನ್ನು ಸಂಘಟಿಸುವ ಹಾಗೂ ಶಿಕ್ಷಣ, ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ವತಿಯಿಂದ ಜುಲೈ 19ರಂದು ನಗರದ ಅಂಬಾರಿ ಪ್ಯಾಲೇಸ್‌ನಲ್ಲಿ ಛಲವಾದಿ–ಹೊಲೆಯ ಬಲಗೈ ಜಾತಿಗಳ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಲಗೈ ಜಾತಿಗಳ ಒಕ್ಕೂಟದ ಮುಖಂಡ ವೆಂಕಟ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಮಾವೇಶವನ್ನು ಉದ್ಘಾಟಿಸಲಿದ್ದು, ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸುಮಾರು ಐದು ಸಾವಿರ ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಡಾ. ಟಿ. ಶ್ರೀನಿವಾಸಪ್ಪ ಅವರು ಸಮಾವೇಶದ ಪ್ರಧಾನ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ಹೇಳಿದರು.ಸಮುದಾಯದ ಸಂಘಟನೆಯ ಮೂಲಕ ಜಾಗೃತಿ ಮೂಡಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಶಿಕ್ಷಣ, ರಾಜಕೀಯ ಪ್ರಾತಿನಿಧ್ಯ ಹಾಗೂ ಆರ್ಥಿಕ ಬಲವರ್ಧನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಖಂಡ ವೆಂಕಟ್ ಕೃಷ್ಣ ಮಾತನಾಡಿ, ಬಾ. ಶ್ರೀನಿವಾಸಪ್ಪ ಅವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಬಲಗೈ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದರು.
ಒನಕೆ ಓಬವ್ವ ಅವರ ಸರ್ಕಾರಿ ಜಯಂತಿ ಯಶಸ್ವಿಯಾಗದಿರುವುದಕ್ಕೆ ತಾಲೂಕಿನಲ್ಲಿ ಸಮುದಾಯದ ಸಂಖ್ಯಾಬಲ ಕಡಿಮೆ ಇರುವುದು ಹಾಗೂ ಜಿಲ್ಲೆಯಾದ್ಯಂತ ಸಮುದಾಯವನ್ನು ಒಗ್ಗೂಡಿಸಲು ಸಾಧ್ಯವಾಗದಿರುವುದು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಬಲಗೈ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾತನಾಡಿ, ಹಲವಾರು ದಶಕಗಗಳಿಂದ ಸಾವಿರಾರು ಮಂದಿ ಹಿರಿಯರು ಮುಖಂಡರು ಸಮಾಜದ ಯುವಕರು, ತಾಯಂದಿರು ಸಂಘಟನೆಗಾಗಿ ಬದುಕನ್ನು ತೇದಿದ್ದಾರೆ. ಅವರೆಲ್ಲರನ್ನು ಸ್ಮರಿಸುತ್ತಲೇ ಪ್ರಸ್ತುತ ಸಂಘಟನೆಯನ್ನು ಬಲಗೊಳಿಸುವ ಸಂಕಲ್ಪ ತೊಡಲಾಗಿದೆ. ಈ ನಿಟ್ಟಿನಲ್ಲಿ ಬಲಗೈ ಜಾತಿಗಳ ಒಕ್ಕೂಟದ ವತಿಯಿಂದ ಈ ಸ್ವಾಭಿಮಾನಿ ಸಮಾವೇಶವನ್ನು ಏರ್ಪಡಿಸಲಾಗಿದೆ. ಸಂಘಟನೆಗಳ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಿ ಸರ್ಕಾರದ ಗಮನ ಸೆಳೆಯುವ ಹೋರಾಟ ನಡೆಸಬೇಕು.ಇಂದು ನಾವು ಕೇವಲ ಒಂದು ಸಮುದಾಯದ ಕಾರ್ಯಕ್ರಮಕ್ಕಾಗಿ ಸಂಭ್ರಮಕ್ಕಾಗಿ ಸೇರಬೇಕಿಲ್ಲ. ಬದಲಿಗೆ ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಲು, ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಲು ಮತ್ತು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಒಂದಾಗಿದ್ದೇವೆ, ಒಂದಾಗಿಯೇ ಸಾಗಬೇಕಾಗಿದೆ. ಹೊಲೆಯ ಜನಾಂಗವು ಶತಮಾನಗಳ ಇತಿಹಾಸವನ್ನು ಹೊಂದಿರುವ ಶ್ರಮಜೀವಿ ಸಮುದಾಯವಾಗಿದೆ. ಅನೇಕ ಸಂಕಷ್ಟಗಳು, ಸಾಮಾಜಿಕ ಅಸಮಾನತೆಗಳು ಮತ್ತು ತಾರತಮ್ಯಗಳನ್ನು ಎದುರಿಸಿದರೂ ಈ ಸಮುದಾಯ ತನ್ನ ಆತ್ಮಸ್ಥೆರ್ಯ, ದುಡಿಮೆ ಮತ್ತು ಸಂಸ್ಕೃತಿಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ನಮ್ಮ ಪೂರ್ವಜರ ಶ್ರಮದಿಂದ ಸಮಾಜ ಕಟ್ಟಲ್ಪಟ್ಟಿದೆ. ಅವರ ತ್ಯಾಗ ಬಲಿದಾನದಿಂದ ಗ್ರಾಮಗಳು ಬೆಳೆದಿವೆ ಮತ್ತು ನಾಗರಿಕತೆ ಮುಂದುವರಿದಿದೆ ಎಂದರು.
ಸಮಾವೇಶಕ್ಕೆ ಬಲಗೈ ಸಮುದಾಯದ ಚುನಾಯಿತ ಜನಪ್ರತಿನಿಧಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಸಮುದಾಯದ ನಾಯಕರಾದ ಎಚ್.ಸಿ. ಮಹದೇವಪ್ಪ, ಪ್ರಸಾದ್ ಅಬ್ಬಯ್ಯ, ಬಂಗಾರಪೇಟೆ ನಾರಾಯಣಸ್ವಾಮಿ ಹಾಗೂ ನರೇಂದ್ರ ಸ್ವಾಮಿ ಅವರಿಗೆ ಸಚಿವ ಸ್ಥಾನ ದೊರೆಯಬೇಕೆಂಬುದು ಸಮುದಾಯದ ಆಶಯವಾಗಿದ್ದು, ಅಂತಿಮ ತೀರ್ಮಾನ ಕಾಂಗ್ರೆಸ್ ಹೈಕಮಾಂಡ್‌ಗೆ ಸೇರಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಆಂಜನೇಯ, ಹರೀಶ್, ಮುನಿಕೃಷ್ಣಪ್ಪ, ಮತ್ತಿತರರು ಇದ್ದರು.
ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ವೆಂಕಟ್ ಮಾತನಾಡಿದರು