: ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ । ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಪತ್ರಿಕಾ ದಿನಾಚರಣೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸರ್ಕಾರ ಯೋಜನೆಗಳ ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಸೌಲಭ್ಯ ತಲುಪಿಸುವಲ್ಲಿ ಮಾಧ್ಯಮ ತನ್ನದೇಯಾದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಹೇಳಿದರು.
ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಪ್ರೆಸ್‌ಕ್ಲಬ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಪ್ರಸಕ್ತ ದಿನಗಳಲ್ಲಿ ಪತ್ರಿಕೆಗಳು, ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳು ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯನ್ನು ಸದಾ ಎಚ್ಚರಿಸುವ ಕೆಲಸ ಮಾಡುತ್ತಿವೆ. ಈ ಮಾಧ್ಯಮಗಳ ಕಾರಣಕ್ಕೆ ಶಾಸಕಾಂಗ ಮತ್ತು ಕಾರ್ಯಾಂಗ ವ್ಯವಸ್ಥೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತಾಗಿದೆ. ಮಾಧ್ಯಮ ಕ್ಷೇತ್ರ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವಿನ ಸೇತುವೆಯಾಗಿದೆ ಎಂದರು.ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮ ಮತ್ತು ಆಡಳಿತ ವ್ಯವಸ್ಥೆ ಪರಸ್ಪರ ಸಮನ್ವಯದಿಂದ ಸಾಗಬೇಕು. ಆಡಳಿತ ವ್ಯವಸ್ಥೆ ಮತ್ತು ಜನರ ಸಮಸ್ಯೆಗಳ ಬಗ್ಗೆ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮ ಗಳಲ್ಲಿ ಬಿತ್ತರವಾಗುವ ಯಾವುದೇ ಸಕಾರಾತ್ಮಕ ಅಥವಾ ಟೀಕಾತ್ಮಕ ಸುದ್ದಿಗಳನ್ನು ಆಡಳಿತ ವ್ಯವಸ್ಥೆ ಪ್ರತಿದಿನ ಗಮನಿ ಸುತ್ತಿದೆ. ಇಂತಹ ಸುದ್ದಿಗಳ ಬಗ್ಗೆ ನಿರ್ಲಕ್ಷ್ಯವಹಿಸದೇ ಸಮಸ್ಯೆಗಳ ಪರಿಹಾರಕ್ಕೆ ಆಡಳಿತ ವ್ಯವಸ್ಥೆ ಒತ್ತು ನೀಡುತ್ತಿದೆ.ಒಟ್ಟಿನಲ್ಲಿ ಮಾಧ್ಯಮ ಕ್ಷೇತ್ರ ಆಡಳಿತ ವ್ಯವಸ್ಥೆಯನ್ನು ಸದಾ ಎಚ್ಚರಿಸುವ ಕೆಲಸ ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆ ಯಾಗಿದೆ ಎಂದು ಅಭಿಪ್ರಾಯಿಸಿದರು.ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ ಸಮಾಜವನ್ನು ತಿದ್ದುವ ಮತ್ತು ಪ್ರಶ್ನಿಸುವ ನೈತಿಕತೆ ಇರುವುದು ಪತ್ರಕರ್ತರಿಗೆ ಮಾತ್ರ. ಗ್ರಾಮ ಪಂಚಾಯಿಂದ ಹಿಡಿದು ಪಾರ್ಲಿಮೆಂಟ್‌ವರೆಗೆ ಪತ್ರಿಕೆಗಳ ಸುದ್ದಿಗಳು ಸದ್ದು ಮಾಡುತ್ತವೆ. ಈ ಕಾರಣಕ್ಕೆ ಪತ್ರಿಕಾರಂಗ ಸಮಾಜದಲ್ಲಿ ತನ್ನದೇಯಾದ ಸ್ಥಾನಮಾನ ಹೊಂದಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ, ನೊಂದ ವರಿಗೆ ನ್ಯಾಯ ಕೊಡಿಸುವ, ಅಕಾರಿಗಳು, ರಾಜಕಾರಣಿಗಳ ತಪ್ಪುಗಳ ಬಗ್ಗೆ ಧ್ವನಿ ತಾಕತ್ತು ಇರುವುದು ಮಾಧ್ಯಮಗಳಿಗೆ ಮಾತ್ರ ಎಂದು ಅಭಿಪ್ರಾಯ ಪಟ್ಟರು. ಪ್ರೆಸ್‌ಕ್ಲಬ್ ಅಧ್ಯಕ್ಷ ಚಂದ್ರೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸಕ್ತ ದಿನಗಳಲ್ಲಿ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮ ಜನರ ಧ್ವನಿಯಾಗಿ ಕೆಲಸ ಮಾಡುತ್ತಿವೆ. ನೈತಿಕತೆ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮ ಎತ್ತಿ ಹಿಡಿಯುವ ಕೆಲಸವನ್ನು ಪತ್ರಕರ್ತರು ಮಾಡಬೇಕೆಂದರು.
ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಿ.ಟಿ.ತಿಪ್ಪೇರುದ್ರಪ್ಪ ಮಾತನಾಡಿ, ಪತ್ರಕರ್ತರು ಪ್ರಸಕ್ತ ದಿನಗಳಲ್ಲಿ ಕ್ರಿಯಾಶೀಲ ಹಾಗೂ ಅಧ್ಯಯನ ಶೀಲರಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಮಾಧ್ಯಮ ಕ್ಷೇತ್ರ ಸಮಾಜದಲ್ಲಿ ತನ್ನದೇಯಾದ ಮಾನ್ಯತೆ ಪಡೆಯಲು ಸಾಧ್ಯ. ಪತ್ರಿಕೆಗಳು ಮತ್ತು ದೃಶ್ಯಮಾಧ್ಯಮ ಯಾವಾಗಲು ನಿಷ್ಪಕ್ಷಪಾತ ವಾಗಿರಬೇಕು, ಸಮಾಜಮುಖಿಯಾಗಿರಬೇಕು. ನೊಂದವರು, ಧಮನಿತರು, ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು. ಪತ್ರಕರ್ತರಿಗೆ ರಾಜಕಾರಣಿಗಳು ನೆಪ ಮಾತ್ರ, ಅವರನ್ನು ಓಲೈಸುವ ಕೆಲಸ ಮಾಡದೇ, ತಪ್ಪುಗಳನ್ನು ಎತ್ತಿ ತೋರುವ ಮತ್ತು ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಪ್ರೆಸ್‌ಕ್ಲಬ್ ಖಜಾಂಚಿ ಪುನೀತ್, ಪ್ರೆಸ್‌ಕ್ಲಬ್ ಮಾಜಿ ಅಧ್ಯಕ್ಷ ಪಿ.ರಾಜೇಶ್ , ಉಪಾಧ್ಯಕ್ಷ ಮೂರ್ತಿ ಮೊದಲಾದವರಿದ್ದರು.