ಕನ್ನಡಪ್ರಭ ವಾರ್ತೆ ಗುಬ್ಬಿ

ಬಿಡದಿಯಲ್ಲಿ 9500 ಎಕರೆ ಜಮೀನಿನಲ್ಲಿ ರೈತರು ಅಡಿಕೆ, ತೆಂಗು,ರೇಷ್ಮೆ ಮುಂತಾದ ಬೆಳೆಗಳನ್ನು ಬೆಳೆಯುವ ಜೊತೆಗೆ ಹೈನುಗಾರಿಕೆಯನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಸರ್ಕಾರ ಒಕ್ಕಲೆಬ್ಬಿಸುವ ಕೆಲಸವನ್ನು ಮಾಡುತ್ತಿದೆ ಎಂದು ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಆರೋಪಿಸಿದರು.ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ರೈತರು, ವಿವಿಧ ಪಕ್ಷ ಹಾಗೂ ಸಂಘ- ಸಂಸ್ಥೆಗಳ ಮುಖಂಡರುಗಳು ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ರೈತರು ಹೈನುಗಾರಿಕೆಯನ್ನು ಮಾಡಿಕೊಂಡು ಆರುಲಕ್ಷ ಲೀಟರ್ ಹಾಲನ್ನು ಡೈರಿಗೆ ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಇರುವ ಲೇಔಟ್ ಗಳನ್ನು ಇನ್ನು ಅಭಿವೃದ್ಧಿ ಮಾಡಲು ಆಗದೆ ಇರುವ ಸರ್ಕಾರ ಈಗ ಬಿಡದಿ ಟೌನ್‌ಶಿಪ್ ಮಾಡುವುದು ಅವೈಜ್ಞಾನಿಕ. ಬಿಡದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಕ್ಷಾಂತರ ತೆಂಗು, ಅಡಿಕೆ, ರೇಷ್ಮೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ರೈತರು ಬೆಳೆಯುತ್ತಿದ್ದು, ಸಾವಿರಾರು ಕುಟುಂಬಗಳು ಕೃಷಿಯನ್ನೇ ಜೀವನೋಪಾಯವಾಗಿಸಿಕೊಂಡಿದ್ದಾರೆ. ಆದ್ದರಿಂದ ಬಿಡದಿ ಟೌನ್ ಶಿಪ್ ವಶಪಡಿಸುವಕೊಳ್ಳುವುದನ್ನು ತಕ್ಷಣ ಕೈಬಿಡಬೇಕು ಎಂದು ಹೇಳಿದರು. ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ರೈತರ ನ್ಯಾಯಯುತ ಹೋರಾಟವನ್ನು ಅಪರಾಧದಂತೆ ಬಿಂಬಿಸುವುದು ಸರಿಯಲ್ಲ. ಸರ್ಕಾರ ಕೂಡಲೇ ಹೋರಾಟಗಾರರ ಮೇಲಿನ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆದು, ರೈತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ಕಳೆದ 480 ದಿನಗಳಿಂದ ರೈತರು ಯಾವುದೇ ಹಿಂಸೆಗೆ ಅವಕಾಶ ನೀಡದೆ ಶಾಂತಿಯುತ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಅವರೊಂದಿಗೆ ಸಂವಾದ ನಡೆಸುವ ಬದಲು ಹೋರಾಟಗಾರರು, ರೈತರು ಹಾಗೂ ರೈತ ಮಹಿಳೆಯರ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.ತಾಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ಗ್ರೇಟರ್ ಬೆಂಗಳೂರು ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಮಾಡುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಮಾಡುತ್ತಿದೆ. ಹಾಗೂ ತುಮಕೂರು ಜಿಲ್ಲೆಯ 75ನೇ ಕಿಲೋಮೀಟರ್ ನಿಂದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಕೈಬಿಡಬೇಕು. ಇದು ಹೀಗೆ ಮುಂದುವರೆಸಿದರೆ ರೈತ ವಿರೋಧಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ವೇಳೆ ಬಿ.ಎಸ್.ನಾಗರಾಜು, ಪಿ.ಬಿ. ಚಂದ್ರಶೇಖರ್ ಬಾಬು, ಎಚ್.ಟಿ. ಭೈರಪ್ಪ, ಪಂಚಾಕ್ಷರಯ್ಯ, ಚನ್ನಶೇಟ್ಟಿಹಳ್ಳಿ ಯತೀಶ್, ಜಿ.ಆರ್. ಶಿವಕುಮಾರ್ ಲೋಕೇಶ್, , ಅನಿಲ್, ಪ್ರಕಾಶ್, ಜಿ.ಡಿ. ಸುರೇಶ್ ಗೌಡ, ಶಂಕರ್ ಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ರೈತರು, ರೈತ ಮಹಿಳೆಯರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.