ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ ‘ಕೆಎಸ್‌ಎನ್‌ಡಿಎಂಸಿ’ಯ ‘ವರುಣ ಮಿತ್ರ’ ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮುನ್ಸೂಚನೆ, ಪ್ರತಿ 15 ನಿಮಿಷಕ್ಕೆ ಮಳೆ ಮಾಪನ ಅಂಕಿ-ಅಂಶ ಸಂಗ್ರಹಣೆ, ವಿಪತ್ತು ನಿರ್ವಹಣೆಯಲ್ಲಿ ತಾಂತ್ರಿಕ ವಿಶ್ಲೇಷಣೆ, ವಿವರಣೆ ಹಾಗೂ ತಾಂತ್ರಿಕ ವರದಿ ಸಿದ್ಧಪಡಿಸುವಲ್ಲಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಇದೀಗ ನಿರ್ಲಕ್ಷ್ಯಕ್ಕೀಡಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಹಾಯವಾಣಿ ಕರೆ ಸಂಖ್ಯೆ 2.38 ಲಕ್ಷಕ್ಕೆ ಇಳಿಕೆ

ವರುಣ ಮಿತ್ರ ಕೇಂದ್ರದ ಕಾರ್ಯದ ಬಗ್ಗೆ ಪ್ರಧಾನಿ ಸಹ ಈ ಹಿಂದೆ ಶ್ಲಾಘಿಸಿದ್ದರು. 2011-12ರಲ್ಲಿ ಆರಂಭಗೊಂಡ ವರುಣ ಮಿತ್ರ ಸಹಾಯವಾಣಿ ಸೇವೆ ಈವರೆಗೆ ಬರೋಬ್ಬರಿ 1.70 ಕೋಟಿ ಗೂ ಅಧಿಕ ಕೆರೆ ಬಂದಿವೆ. 2023ರಲ್ಲಿ ಅತಿ ಹೆಚ್ಚು 22.49 ಲಕ್ಷ ಕರೆ ಸ್ವೀಕರವಾಗಿದ್ದು, 2024ರಲ್ಲಿ 17 ಲಕ್ಷಕ್ಕೆ ಇಳಿಕೆಯಾಗಿದ್ದು, 2025ರಲ್ಲಿ 11.59 ಲಕ್ಷಕ್ಕೆ ಕುಸಿದಿದೆ. ಪ್ರಸಕ್ತ 2026ರ ಮೇ ಅಂತ್ಯದ ವರೆಗೆ 2.38 ಲಕ್ಷ ಕೆರೆ ಮಾತ್ರ ಸ್ವೀಕಾರವಾಗಿವೆ. ವಿಜ್ಞಾನಿಗಳಿಗೆ ಕರೆ ಸ್ವೀಕರಿಸುವ ಹೊಣೆ


ಗ್ರಾಪಂ ಮಟ್ಟದಲ್ಲಿ ಅಳವಡಿಸಿದ್ದ ಮಳೆ ಮಾಪನ ಸೆನ್ಸಾರ್‌ಗಳಿಂದ ಸಂಗ್ರಹವಾಗುವ ದತ್ತಾಂಶ ವಿಶ್ಲೇಷಣೆ ಮಾಡಿ ವರದಿ ಸಿದ್ಧಪಡಿಸುತ್ತಿದ್ದ ಕೆಎಸ್‌ಎನ್‌ಡಿಎಂಸಿಯ ವಿಜ್ಞಾನಿಗಳಿಗೆ ಇದೀಗ, ವರುಣ ಮಿತ್ರ ಕೇಂದ್ರದಲ್ಲಿ ದೂರು ಕೇಳುವ ಕೆಲಸ ವಹಿಸಲಾಗಿದೆ. ವರುಣ ಮಿತ್ರ ಕೇಂದ್ರದಲ್ಲಿ ಕಾರ್ಯವರ್ಹಿಸುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ ಬಳಿಕ ವಿಜ್ಞಾನಿಗಳು ಈ ಕೆಲಸ ಮಾಡಬೇಕಾದ ಪರಿಸ್ಥಿತಿ ಕೆಎಸ್‌ಎನ್‌ಡಿಎಂಸಿಯಲ್ಲಿ ನಿರ್ಮಾಣಗೊಂಡಿದೆ. 8 ತಿಂಗಳಿಂದ ಸಿಬ್ಬಂದಿಗೆ ವೇತನವಿಲ್ಲ

ಕೆಎಸ್‌ಎನ್‌ಡಿಎಂಸಿ ಕಚೇರಿಯಲ್ಲಿ ಕಾರ್ಯವಹಿಸುತ್ತಿರುವ ಸಿಬ್ಬಂದಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿಸಿಲ್ಲ. ವೇತನ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಸಂಸ್ಥೆಯ ನಿರ್ದೇಶಕರು ಸಬೂಬು ಹೇಳಲಾಗುತ್ತಿದೆ ಎಂದು ಕೆಎಸ್‌ಎನ್‌ಡಿಎಂಸಿಯ ನೌಕರರು ಪತ್ರ ಬರೆದಿರುವುದು ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಒಂದು ತಿಂಗಳಲ್ಲಿ ಮಳೆ ಮಾಪನ ದುರಸ್ತಿ ಪೂರ್ಣರಾಜ್ಯದಲ್ಲಿ ಗ್ರಾಪಂ ಮಟ್ಟದಲ್ಲಿರುವ ಮಳೆ ಮಾಪನ ಸೆನ್ಸರ್‌ಗಳ ಪೈಕಿ 1,044 ಸೆನ್ಸರ್‌ ದುರಸ್ತಿಗೆ ಈಗಾಗಲೇ ಕ್ರಮ ವಹಿಸಲಾಗಿದ್ದು, 452 ದುರಸ್ತಿ ಪೂರ್ಣಗೊಂಡಿದೆ. ಒಂದು ತಿಂಗಳಲ್ಲಿ ಎಲ್ಲ ಸೆನ್ಸರ್‌ ದುರಸ್ತಿ ಪೂರ್ಣವಾಗಲಿದೆ. ಉಳಿದಂತೆ 1950 ಹೊಸ ಸೆನ್ಸರ್‌ ಅಳವಡಿಕೆಗೆ ಕ್ರಮವಹಿಸಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಎಂ.ಎಸ್‌. ದಿವಾಕರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಕೆಎಸ್‌ಎನ್‌ಡಿಎಂಸಿ ಸಿಬ್ಬಂದಿಗೆ ಕಿರುಕುಳ?ಸಂಸ್ಥೆಯ ನೌಕರರಿಗೆ ಪಿಎಫ್‌ ಕಡಿತಗೊಳಿಸದೇ ವೇತನ ನೀಡಲಾಗುತ್ತಿದೆ. ಹಾಲಿ ನಿರ್ದೇಶಕರ ನಿರ್ವಹಿಸಬೇಕಾದ ಇ- ಆಫೀಸ್‌ ಅನ್ನು ಕೇಂದ್ರದ ಆಡಳಿತಾಧಿಕಾರಿಯೇ ನಿರ್ವಹಿಸುತ್ತಿದ್ದು, ನಿರ್ದೇಶಕರ ಪರವಾಗಿ ಆಡಳಿತಾಧಿಕಾರಿಯೇ ಟಿಪ್ಪಣಿ ಬರೆಯುತ್ತಿದ್ದಾರೆ. ಆಡಳಿತಾಧಿಕಾರಿ ವಿನಾಕಾರಣ ನೌಕರರಿಗೆ ನೋಟಿಸ್‌ ನೀಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವನ್ನು ಸಹ ನೌಕರರು ಮಾಡಿದ್ದಾರೆ.

2020ರ ನಂತರ ಕೆಎಸ್‌ಎನ್‌ಡಿಎಂಸಿಗೆ ಕಾಯಂ ನಿರ್ದೇಶಕರನ್ನು ನೇಮಕ ಮಾಡದೇ ಸರ್ಕಾರ ಐಎಎಸ್‌ ಅಧಿಕಾರಿಗಳನ್ನು ನೇಮಿಸುತ್ತಿದೆ. ನಾಲ್ಕೈದು ತಿಂಗಳಿಗೆ ಈ ಐಎಎಸ್‌ ಅಧಿಕಾರಿಗಳ ಬದಲಾವಣೆಯಿಂದ ಕೆಎಸ್‌ಎನ್‌ಡಿಎಂಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಐಎಎಸ್‌ ಅಧಿಕಾರಿಗಳು ಆಡಳಿತಾತ್ಮಕ ಕಾರ್ಯದಲ್ಲಿ ಮಾತ್ರ ಪರಿಣಿತರಾಗಿದ್ದು, ಕೆಎಸ್‌ಎನ್‌ಡಿಎಂಸಿಯ ಮೂಲ ಕಾರ್ಯದಲ್ಲಿ ತೊಡಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿವೆ.ಕೋಟ್‌.......ವರುಣ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ಏಜೆನ್ಸಿ ಮೂಲಕ ಸಿಬ್ಬಂದಿ ನೇಮಿಸಲಾಗಿತ್ತು. ಅವಧಿ ಮುಕ್ತಾಯವಾದರಿಂದ ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾನೂ ಸಹ ವರುಣ ಮಿತ್ರ ಸಹಾಯವಾಣಿಯಲ್ಲಿ ಹೋಗಿ ಕುಳಿತು ಕರೆ ಸ್ವೀಕಾರ ಮಾಡುತ್ತೇನೆ. ದಿನಕ್ಕೆ ಈಗಲೂ 4 ರಿಂದ 5 ಸಾವಿರ ಕರೆ ಸ್ವೀಕಾರ ಮಾಡಲಾಗುತ್ತಿದೆ. ಈ ಬಾರಿ ಮಳೆ ಕೊರತೆ, ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ನಲ್ಲಿ ಸಮಗ್ರ ಮಾಹಿತಿ ರೈತರಿಗೆ ದೊರೆಯುತ್ತಿರುವುದರಿಂದ ಸಹಾಯವಾಣಿಗೆ ಕರೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.-ಎಂ.ಎಸ್‌.ದಿವಾಕರ್‌, ನಿರ್ದೇಶಕರು, ಕೆಎಸ್‌ಎನ್‌ಡಿಎಂಸಿ.