ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಜಿಲ್ಲೆಯ ಸಾರ್ವಜನಿಕರು ಹಾಗೂ ಬಡ ರೋಗಿಗಳಿಗೆ ಆರೋಗ್ಯ ಕ್ಷೇತ್ರದ ಬಹುದೊಡ್ಡ ಬೇಡಿಕೆಯೊಂದು ಈಡೇರುತ್ತಿದೆ. ಹಾವೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊನೆಗೂ ಬಹುನಿರೀಕ್ಷಿತ ಹಾಗೂ ಅತ್ಯಾಧುನಿಕ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಬಂದಿಳಿದಿದ್ದು, ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಇದರ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಇನ್ನು 15 ದಿನಗಳಲ್ಲಿ ಸ್ಕ್ಯಾನಿಂಗ್ ಸೇವೆ ಆರಂಭವಾಗಲಿದೆ.
ಜಿಲ್ಲೆಯ ಜನತೆಗೆ ಸ್ಥಳೀಯವಾಗಿಯೇ ಉನ್ನತ ದರ್ಜೆಯ ಸ್ಕ್ಯಾನಿಂಗ್ ಸೌಲಭ್ಯ ಇನ್ನು ಮುಂದೆ ಲಭ್ಯವಾಗಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಈ ಹೈಟೆಕ್ ಯಂತ್ರ ಪೂರೈಕೆಯಾಗಿದ್ದು, ಜಿಲ್ಲಾಸ್ಪತ್ರೆ ಕಟ್ಟಡದಲ್ಲೇ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯ ಜನತೆಗೆ ಈ ಹಿಂದೆ ಎಂಆರ್‌ಐ ಸ್ಕ್ಯಾನಿಂಗ್‌ಗೆ ಬೇರೆ ಜಿಲ್ಲೆಗೆ ಹೋಗಬೇಕಿತ್ತು. ಜಿಲ್ಲಾಸ್ಪತ್ರೆಯಿಂದ ಚಿತ್ರದುರ್ಗ ಆಸ್ಪತ್ರೆಗೆ ರೆಫರೆನ್ಸ್ ಮಾಡಲಾಗುತ್ತಿತ್ತು. ಹಾವೇರಿ ಮೆಡಿಕಲ್ ಕಾಲೇಜು ಆರಂಭವಾದ ಮೇಲೆ ಆರೋಗ್ಯ ಕ್ಷೇತ್ರದ ಅತ್ಯಾಧುನಿಕ ಸೌಲಭ್ಯ ಇಲ್ಲೇ ಸಿಗಲು ಆರಂಭವಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.ಅಲೆದಾಟಕ್ಕೆ ಮುಕ್ತಿ:ಇದುವರೆಗೆ ಹಾವೇರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಇರಲಿಲ್ಲ. ಇದರಿಂದಾಗಿ ತುರ್ತು ಚಿಕಿತ್ಸೆ ಬೇಕಾದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಸ್ಕ್ಯಾನಿಂಗ್‌ಗಾಗಿ ಹುಬ್ಬಳ್ಳಿ, ದಾವಣಗೆರೆ ಅಥವಾ ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರಗಳನ್ನು ಅವಲಂಬಿಸಬೇಕಾಗಿತ್ತು. ಇದು ಸಾರ್ವಜನಿಕರಿಗೆ ಆರ್ಥಿಕ ಹೊರೆಯ ಜತೆಗೆ ಸಮಯದ ವ್ಯರ್ಥಕ್ಕೂ ಕಾರಣವಾಗಿತ್ತು. ಆದರೆ, ಜಿಲ್ಲೆಯಲ್ಲಿ ನೂತನವಾಗಿ ಮೆಡಿಕಲ್ ಕಾಲೇಜು ಆರಂಭವಾದ ಹಿನ್ನೆಲೆಯಲ್ಲಿ ಈ ಅತ್ಯಾಧುನಿಕ ಸೌಲಭ್ಯ ಸಾರ್ವಜನಿಕರ ಕೈಗೆಟುಕುವಂತಾಗಿದೆ. ಇನ್ಮುಂದೆ ಅತ್ಯಂತ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಸ್ಥಳೀಯವಾಗಿಯೇ ಸ್ಕ್ಯಾನಿಂಗ್ ಸೌಲಭ್ಯ ಸಿಗಲಿದೆ.
ಯಂತ್ರ ಅಳವಡಿಕೆ ಪ್ರಗತಿಯಲ್ಲಿ-
ಜಿಲ್ಲಾಸ್ಪತ್ರೆಯು ಮೆಡಿಕಲ್ ಕಾಲೇಜು ಅಡಿಯಲ್ಲಿ ಬಂದ ಮೇಲೆ ಮೂಲಸೌಲಭ್ಯ ಮತ್ತು ಗುಣಮಟ್ಟದಲ್ಲಿ ಪ್ರಗತಿಯಾಗುತ್ತಿದೆ. ಮೆಡಿಕಲ್ ವಿದ್ಯಾರ್ಥಿಗಳು, ಪಿಜಿ ಡಾಕ್ಟರ್‌ಗಳು ಲಭ್ಯವಾಗುತ್ತಿರುವುದರಿಂದ ಬರುವ ರೋಗಿಗಳಿಗೆ ಅನುಕೂಲವಾಗಿದೆ. ಜಿಲ್ಲಾಸ್ಪತ್ರೆಯು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧನಾ ಆಸ್ಪತ್ರೆಯೂ ಆಗಿರುವುದರಿಂದ ಅಲ್ಲಿಯೇ ಹೊಸ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ಅಳವಡಿಸಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕೇವಲ ಯಂತ್ರ ಅಳವಡಿಕೆ ಮಾತ್ರವಲ್ಲದೆ, ಇದನ್ನು ನಿರ್ವಹಿಸಲು ಈಗಾಗಲೇ ಇಬ್ಬರು ನುರಿತ ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
ರೋಗ ನಿರ್ಣಯಕ್ಕೆ ಅನುಕೂಲ: ಆರಂಭಿಕ ಹಂತದಲ್ಲಿ ದಿನಕ್ಕೆ 40ರಿಂದ 50 ಸ್ಕ್ಯಾನಿಂಗ್ ವರದಿಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕೃಷ್ಣಾ ಏಜೆನ್ಸಿಗೆ ಪ್ರಸ್ತಾವನೆ ನೀಡುವಂತೆ ಹಿಮ್ಸ್ ನಿರ್ದೇಶಕರು ಸೂಚಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಸಕಾಲಿಕ ಕ್ರಮದಿಂದಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ಈ ಹೈಟೆಕ್ ಕಳೆ ಬಂದಿದೆ. ಇನ್ಮುಂದೆ ಅಪಘಾತ ಅಥವಾ ಇತರೆ ತುರ್ತು ಸಂದರ್ಭಗಳಲ್ಲಿ ರೋಗ ನಿರ್ಣಯ ಮಾಡುವುದು ವೈದ್ಯರಿಗೂ ಸುಲಭವಾಗಲಿದೆ.ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಬಂದಿದ್ದು, ಅಳವಡಿಕೆ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲಿ ಉದ್ಘಾಟನೆ ಮಾಡಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು. ಇನ್ನು ಮುಂದೆ ಎಂಆರ್‌ಐ ಸ್ಕ್ಯಾನಿಂಗ್‌ಗಾಗಿ ಬೇರೆ ಕಡೆ ಹೋಗುವುದು ತಪ್ಪಲಿದೆ. ಅಲ್ಲದೇ ತ್ವರಿತವಾಗಿ ವರದಿ ಸಿಗುವುದರಿಂದ ಅನುಕೂಲವಾಗಲಿದೆ ಎಂದು ಹಾವೇರಿ ಹಿಮ್ಸ್ ನಿರ್ದೇಶಕ ಡಾ. ಪ್ರದೀಪಕುಮಾರ ಎಂ.ವಿ. ಹೇಳಿದರು.