ಜಿಲ್ಲಾ ಕೇಂದ್ರ ಕಾರವಾರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಶಿರಸಿಗೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿರುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಯತ್ನವನ್ನು ಕೂಡಲೇ ಕೈಬಿಡದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲಾ ಕೇಂದ್ರ ಕಾರವಾರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಶಿರಸಿಗೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿರುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಯತ್ನವನ್ನು ಕೂಡಲೇ ಕೈಬಿಡದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಮಾಧವ ನಾಯಕ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದರು.

ಕಾರವಾರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾದ ಬಳಿಕ ಜಿಲ್ಲಾಸ್ಪತ್ರೆಯನ್ನು ಅದರೊಂದಿಗೆ ವಿಲೀನಗೊಳಿಸಲಾಯಿತು. ಆದರೆ, ಅಂದಿನಿಂದ ಬಡವರಿಗೆ ಉಚಿತ ಚಿಕಿತ್ಸೆ ಮರೀಚಿಕೆಯಾಗಿದೆ. ಬಿಪಿಎಲ್ ಕಾರ್ಡುದಾರರಿಂದಲೂ ಒಪಿಡಿಯಲ್ಲಿ ಶೇ.50ರಷ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾದ ಬಳಿಕ ಉಚಿತವೆಂದು ಹೇಳಿದರೂ, ಆಯುಷ್ಮಾನ್ ಯೋಜನೆಯಡಿ ಹೊಂದಾಣಿಕೆ ಮಾಡಿಕೊಂಡು ಬಡವರ ಸುಲಿಗೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ತೀವ್ರ ಕೊರತೆಯಿದೆ. ಕನಿಷ್ಠ ಸೆಪ್ಟಿಕ್ ಟ್ಯಾಂಕ್ ಕೂಡ ಇಲ್ಲದೆ, ಆಸ್ಪತ್ರೆಯ ವೈದ್ಯಕೀಯ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹರಿಸಲಾಗುತ್ತಿದೆ. ಕಾರವಾರಕ್ಕೆ ಬರಬೇಕಿದ್ದ ಎಂಆರ್‌ಐ ಯಂತ್ರ ಉಡುಪಿ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದು, ಜಿಲ್ಲೆಯ ಜನರು ಮಂಗಳೂರು, ಉಡುಪಿಯನ್ನು ಅವಲಂಬಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದೀಪಕ ಕುಡಾಳಕರ್, ಕಾರವಾರ ತಾಲೂಕಿಗೆ ಕನಿಷ್ಠ ಒಂದು ತಾಲೂಕು ಆಸ್ಪತ್ರೆಯೂ ಇಲ್ಲ. ಹೀಗಿರುವಾಗ ದಶಕಗಳಿಂದ ಸೇವೆ ನೀಡುತ್ತಿದ್ದ ಜಿಲ್ಲಾಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಶಿರಸಿಗೆ ಸ್ಥಳಾಂತರಿಸಬಾರದು. ಶಿರಸಿಯಲ್ಲಿ ಬೇಕಾದರೆ ಸರ್ಕಾರ ಹೊಸ ಆಸ್ಪತ್ರೆ ನಿರ್ಮಾಣ ಮಾಡಿಕೊಳ್ಳಲಿ, ಅದಕ್ಕೆ ನಮ್ಮ ವಿರೋಧವಿಲ್ಲ. ಅಂಕೋಲಾ ಸಮೀಪದ ಹಟ್ಟಿಕೇರಿಯಲ್ಲಿ ಲಭ್ಯವಿರುವ 18 ಎಕರೆ ಜಾಗದಲ್ಲಿ ಜಿಲ್ಲಾಸ್ಪತ್ರೆ ಮಾಡಲು ಅನುಕೂಲ ಇದೆ ಎಂದು ಸಲಹೆ ನೀಡಿದರು.

ಪ್ರಮುಖರಾದ ಕೆ.ಡಿ. ಪೆಡ್ನೇಕರ್, ರಾಘು ನಾಯ್ಕ, ರಾಜೇಂದ್ರ ಅಂಚೇಕರ್, ಅಬ್ಬಾಸ್ ಮುಲ್ಲಾ, ಜಾನಿ ಲೂಪಿಸ್, ಅಲ್ತಾಫ್ ಶೇಖ್, ಗೋಪಾಲಕೃಷ್ಣ ನಾಯ್ಕ, ರಾಮಾ ನಾಯ್ಕ, ಖೈರುನ್ನೀಸಾ ಶೇಖ್, ಸೂರಜ್ ಕುರುಮಕರ್ ಮತ್ತಿತರರು ಇದ್ದರು.