ಉಡುಪಿ: ಉಡುಪಿಯ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ 2026ನೇ ಸಾಲಿನ ಯಕ್ಷ ಪೋಷಕ ಗೌರವ ಪ್ರಶಸ್ತಿಗೆ ಕಲಾ ಸಂಘಟಕ ವೈ. ಕರುಣಾಕರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಇಂದ್ರಾಳಿಯ ಯಕ್ಷಗಾನ ಕೇಂದ್ರದ ಸಹಯೋಗದಲ್ಲಿ ನೀಡಲಾಗುವ ಈ ಪ್ರಶಸ್ತಿ ಪ್ರದಾನ ಸಮಾರಂಭವು ಆ. 23ರಂದು ಉಡುಪಿ ಪುರಭವನದಲ್ಲಿ ನಡೆಯಲಿದೆ.
ಕರುಣಾಕರ ಶೆಟ್ಟಿ ಕರಾವಳಿಯ ಹಲವು ಯಕ್ಷಗಾನ ಮೇಳಗಳ ಯಜಮಾನ ಹಾಗೂ ಹೆಸರಾಂತ ಕಲಾ ಸಂಘಟಕರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 45ಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿರುವ ಅವರು ಕಳೆದ 4 ದಶಕಗಳಿಂದ ಪೆರ್ಡೂರಿನ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಜೊತೆಗೆ ಶ್ರೀ ಕ್ಷೇತ್ರ ಹಾಲಾಡಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಸಿಗಂದೂರು ಮೇಳವನ್ನೂ ಸಮರ್ಥವಾಗಿ ಮುನ್ನಡೆಸುತ್ತಾ ಗುಣಮಟ್ಟದ ಯಕ್ಷಗಾನ ಪ್ರದರ್ಶನಗಳಿಗೆ ಕಾರಣೀಭೂತರಾಗಿದ್ದಾರೆ.ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಕಲಾವಿದರ ಬದುಕಿಗೆ ಆಸರೆಯಾಗಿದ್ದ ಅವರ ಸುದೀರ್ಘ ಕಲಾ ಸೇವೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಗಮನಿಸಿ ನೂರಕ್ಕೂ ಹೆಚ್ಚು ಸನ್ಮಾನಗಳು ಹಾಗೂ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಯಕ್ಷಗಾನ ಕ್ಷೇತ್ರದ ಅಭಿವೃದ್ಧಿಗೆ ಅವರು ಸಲ್ಲಿಸಿರುವ ಸೇವೆ ಕರಾವಳಿಯ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಯಕ್ಷ ಪೋಷಕ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಂದು ಪ್ರಸಿದ್ಧ ಯಕ್ಷ ಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಾರ್ಜುನ ಕಾಳಗ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.