ಉಡುಪಿ: ಅಯೋಧ್ಯೆಯ ರಾಮಮಂದಿರದ ಹುಂಡಿ ಹಗರಣದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಸಂತರನ್ನು ಅವಮಾನಿಸಿರುವುದರ ಪ್ರತಿಭಟನಾರ್ಥ ವಿವಿಧ ಸಂಘಟನೆಗಳ ವತಿಯಿಂದ ದೆಹಲಿಯ ಜಂತರ್‌ಮಂತರ್‌ನಲ್ಲಿ ಸದ್ಬುದ್ಧಿ ಹೋಮ ನಡೆಸಲಾಯಿತು.
ರಾಮಮಂದಿರ ಪ್ರಕರಣವು ತನಿಖೆಯ ಹಂತದಲ್ಲಿದ್ದು, ಈ ಪ್ರಕರಣವನ್ನು ಮುಂದಿಟ್ಟುಕೊಂಡು ದೇಶದ ಸಂಸತ್ತಿನ ಅಂಗಣದಲ್ಲಿ ಶುಕ್ರವಾರದಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದ ಪಪ್ಪು ಯಾದವ್ ಸೇರಿದಂತೆ ಕೆಲವು ಸಂಸದರು ಖಾವಿ ತೊಟ್ಟು ಸಂತರನ್ನು ಅತ್ಯಂತ ನಿಕೃಷ್ಟವಾಗಿ ವಿಡಂಬಿಸಿ ಪ್ರಹಸನವನ್ನು ನಡೆಸಿದ್ದರು.ಇದರ ಪ್ರತಿಭಟನಾರ್ಥ ವಿಶ್ವ ಹಿಂದು ಪರಿಷತ್ ದೆಹಲಿ ರಾಜ್ಯ ಘಟಕ ಮತ್ತು ದೆಹಲಿ ಸಂತ ಮಹಾಮಂಡಲಗಳು ಈ ಸದ್ಬುದ್ಧಿ ಹೋಮ ಕಾರ್ಯಕ್ರಮವನ್ನು ಆಯೋಜಿಸಿದವು. ಇದಲ್ಲಿ ವಿಹಿಂಪ ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯರಾಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭಾಗವಹಿಸಿದರು. ಅನೇಕ ಸಾಧು ಸಂತರು ನೂರಾರು ಹಿಂದು ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.