ಸಾರಾಂಶ
ಮಹಾರಾಣಿ ಕಾಲೇಜಿಗೆ ಸುತ್ತಮುತ್ತಲಿನ ಎಲ್ಲಾ ಹಳ್ಳಿಯ ಬಡ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಪಡೆದುಕೊಳ್ಳಲು ಬರುತ್ತಾರೆ,
ಕನ್ನಡಪ್ರಭ ವಾರ್ತೆ ಮೈಸೂರು
ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೂನ್ಯ ಶುಲ್ಕ (ಜೀರೋ ಪೇಮೆಂಟ್) ತೆಗೆದು ಹಾಕಿ, ಧಿಡೀರನೇ ಪ್ರವೇಶ ಶುಲ್ಕವನ್ನು ಕಟ್ಟುವಂತೆ ಒತ್ತಾಯಿಸುತ್ತಿರುವುದನ್ನು ಖಂಡಿಸಿ ಎಐಡಿಎಸ್ಒ ಸಂಘಟನೆಯ ನೇತೃತ್ವದಲ್ಲಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಮೈಸೂರು ವಿವಿ ಕ್ರಾಫರ್ಡ್ ಭವನದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ಕಳೆದ ವರ್ಷದವರೆಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸುತ್ತಿರಲಿಲ್ಲ. ಜೀರೋ ಪೇಮೆಂಟ್ ಇರುತ್ತಿತ್ತು. ಆದರೆ, ಈ ವರ್ಷ ಏಕಾಏಕಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಪಾವತಿಸುವಂತೆ ಒತ್ತಾಯ ಮಾಡಿದ್ದಾರೆ. ಬಹುಪಾಲು ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಬಂದಿಲ್ಲ. ಹೀಗಾಗಿ, ಶುಲ್ಕವನ್ನು ಕಟ್ಟಲು ಬಹಳ ಕಷ್ಟವಾಗಿದೆ ಎಂದು ಅವರು ದೂರಿದರು.ಮಹಾರಾಣಿ ಕಾಲೇಜಿಗೆ ಸುತ್ತಮುತ್ತಲಿನ ಎಲ್ಲಾ ಹಳ್ಳಿಯ ಬಡ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಪಡೆದುಕೊಳ್ಳಲು ಬರುತ್ತಾರೆ, ಆದರೆ, ಸರ್ಕಾರ ಮತ್ತು ಮೈಸೂರು ವಿಶ್ವವಿದ್ಯಾನಿಲಯ ತನ್ನ ವ್ಯಾಪಾರ ಧೋರಣೆಯಿಂದ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲು ಪ್ರಯತ್ನಿಸುತ್ತಿದೆ. ಧಿಡೀರನೆ ಪರೀಕ್ಷಾ ಶುಲ್ಕವನ್ನು ಕಟ್ಟಲು ತಿಳಿಸಿದ್ದಾರೆ. ಯಾವುದೇ ಕಾಲಾವಕಾಶ ಕೊಡದೆ ಇಂದೇ ಕೊನೆಯ ದಿನ ಎಂದು ಹೇಳಿದ್ದಾರೆ. ಇದು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಉಂಟು ಮಾಡಿದೆ ಎಂದು ಅವರು ಕಿಡಿಕಾರಿದರು.ಈ ಹಿಂದಿನಂತೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಜೀರೋ ಪೇಮೆಂಟ್ ಮಾಡಿಸಿಕೊಳ್ಳಬೇಕು. ಪರೀಕ್ಷಾ ಶುಲ್ಕವನ್ನು ಕಟ್ಟಲು ದಿನಾಂಕವನ್ನು ಮುಂದೂಡಬೇಕು. ಅತ್ಯಂತ ತರಾತುರಿಯಲ್ಲಿ ನಡೆಸುತ್ತಿರುವ ಪದವಿ ಪರೀಕ್ಷೆಗಳನ್ನು ಮುಂದೂಡಬೇಕು. ಪರೀಕ್ಷಾ ಪ್ರವೇಶಾತಿ ಶುಲ್ಕದ ಏರಿಕೆಯನ್ನು ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದರು.ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಹೇಮಾ, ಚಂದ್ರಿಕಾ, ಅಂಜಲಿ, ಅಭಿಷೇಕ್, ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಾದ ಸಿಂಚನಾ, ರಂಜಿತಾ, ಚಂದನಾ, ನಿಖಿತಾ, ರಕ್ಷಿತಾ ಮೊದಲಾದವರು ಇದ್ದರು.