ಸಾರಾಂಶ
ಶಿವಾನಂದ ಅಂಗಡಿ
ಹುಬ್ಬಳ್ಳಿ:ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಟ್ಟೆ ಸೇರಿ ಜವಳಿ ಅಂಗಡಿಗಳು ಮಹಿಳಾ ಗ್ರಾಹಕರಿಂದ ಗಿಜಿಗುಡುತ್ತಿವೆ. ವ್ಯಾಪಾರಸ್ಥರು ಲಕ್ಷೋಪಲಕ್ಷ ರು.ಗಳ ಲೆಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.
ಇಲ್ಲಿಯ ಮೂರುಸಾವಿರ ಮಠದ ಬಳಿ ಇರುವ ದಾಜಿಬಾನ್ ಪೇಟೆ ರಸ್ತೆ ಹಾಗೂ ಶೀಲವಂತರ ಓಣಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಿದ್ಧ ಜವಳಿ ಅಂಗಡಿಗಳು ಇದ್ದು, ಅಲ್ಲಿಯ ರಸ್ತೆಗಳು ಬೆಳಗ್ಗೆಯಿಂದ ರಾತ್ರಿವರೆಗೂ ಗಿಜಿಗುಡುತ್ತಿವೆ.ನ್ಯೂ ಸಂಗಮ, ಎಸ್.ಟಿ. ಭಂಡಾರಿ, ಪ್ರೀತಿ ಸಿಲ್ಕ್ಸ್, ನ್ಯೂ ಗುಡಿ ಡ್ರೆಸಸ್, ಸಂಗಮ ಫ್ಯಾಶನ್ಸ್ ಸೇರಿ ತರಹೇವಾರಿ ಬಟ್ಟೆ ಹಾಗೂ ಜವಳಿ ಅಂಗಡಿಗಳಿವೆ. ಗಂಗಾವತಿ ಸಿಲ್ಕ್ ಪ್ಯಾಲೇಸ್ ಮಾಲೀಕತ್ವದ ಎರಡು ಮಳಿಗೆಗಳು ಇದೇ ರಸ್ತೆಯಲ್ಲಿದ್ದು, ಹುಬ್ಬಳ್ಳಿಗೆ ಜವಳಿ ಉದ್ಯಮದಲ್ಲಿ ಖ್ಯಾತಿ ತಂದು ಕೊಟ್ಟಿವೆ. ದೀಪಾವಳಿ ಮೊದಲ ದಿನ ಗುರುವಾರ ನರಕ ಚತುದರ್ಶಿ, ಶುಕ್ರವಾರ ಅಮಾವಾಸ್ಯೆ, ಶನಿವಾರ ಬಲಿಪಾಡ್ಯಮಿ ಹೀಗೆ ಮೂರು ದಿನ ವ್ಯಾಪಾರದ ಮಳಿಗೆ, ಅಂಗಡಿ ಸೇರಿದಂತೆ ಮನೆ ಮನೆಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಲಿದ್ದು, ಈ ಪೂಜೆಗೆ ಮಹಿಳೆಯರು ಸೀರೆ ಹಾಗೂ ಜಂಪರ್‌ಪೀಸ್ ಖರೀದಿಸುತ್ತಾರೆ. ಇದರ ಜತೆಯಲ್ಲೇ ಮನೆ ಹೆಣ್ಣು ಮಕ್ಕಳಿಗೂ ಸೀರೆ, ಮಕ್ಕಳಿಗೆ ರೆಡಿಮೇಡ್ ಬಟ್ಟೆ ಖರೀದಿಸುತ್ತಿದ್ದು, ಒಂದೊಂದು ಕುಟುಂಬಸ್ಥರು ಐದಾರು ಸಾವಿರ ರು. ಬಟ್ಟೆ ಖರೀದಿಸುತ್ತಿದ್ದಾರೆ. ವ್ಯಾಪಾರಸ್ಥರು ಝಣ ಝಣ ಕಾಂಚಾಣ ಎಣಿಸುತ್ತ ಸಂಭ್ರಮಿಸುತ್ತಿದ್ದಾರೆ.
ಗೃಹಲಕ್ಷ್ಮಿ, ಶಕ್ತಿ ಯೋಜನೆ ಪ್ರಭಾವ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿ ಪೈಕಿ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೊಮ್ಮೆ ₹ 2000, ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಸಹ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಹೀಗಾಗಿ ಮಹಿಳೆಯರೇ ಹುಬ್ಬಳ್ಳಿಯಲ್ಲಿ ಬಟ್ಟೆ ಸೇರಿದಂತೆ ಪೂಜೆಗೆ ಬೇಕಾದ ಸಾಮಗ್ರಿ ಖರೀದಿಗೆ ಆಗಮಿಸುತ್ತಿದ್ದಾರೆ.
ಮದುವೆ ಜವಳಿ ಖರೀದಿಗೂ ಹುಬ್ಬಳ್ಳಿ ದಾಜಿಬಾನಪೇಟೆ ಪ್ರಸಿದ್ಧವಾಗಿದ್ದು, ಕಾರ್ತಿಕ ಮಾಸ ಸೇರಿದಂತೆ ಏಪ್ರಿಲ್-ಮೇ ತಿಂಗಳಲ್ಲಿಯೂ ಇಲ್ಲಿಗೆ ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಆಗಮಿಸಿ ಜವಳಿ ಖರೀದಿಸುವುದು ಕಂಡು ಬರುತ್ತದೆ.ಆಷಾಢ ಮಾಸದಲ್ಲಿ ವ್ಯಾಪಾರ ಇಳಿಮುಖವಾಗುತ್ತದೆ. ಆದರೆ, ಇದೇ ಅವಧಿಯಲ್ಲೇ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಕೊಡುಗೆಗಳನ್ನು ನೀಡುವ ಇಲ್ಲಿಯ ಜವಳಿ ವ್ಯಾಪಾರಸ್ಥರು ತಮ್ಮ ಹಳೆಯ ಸ್ಟಾಕ್ ಖಾಲಿ ಮಾಡುತ್ತಾರೆ. ಶ್ರಾವಣದ ನಾಗರಪಂಚಮಿಯಿಂದ ಹಬ್ಬಗಳು ಸಾಲು ಶುರುವಾಗುತ್ತದೆ. ಶ್ರಾವಣದ ಬಳಿಕ ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿ, ಮಹಾನವಮಿ, ಕೆಲ ದಿನಗಳಲ್ಲೇ ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಜವಳಿ ವ್ಯಾಪಾರಸ್ಥರಿಗೆ ಹಂಗಾಮು ಸೃಷ್ಟಿಸಿವೆ.
ಜವಳಿ ಖರೀದಿಗೆ ಹುಬ್ಬಳ್ಳಿಯ ದಾಜಿಬಾನಪೇಟೆ ಹಲವು ವರ್ಷಗಳಿಂದ ಪ್ರಸಿದ್ಧವಾಗಿದ್ದು, ಗ್ರಾಹಕರಿಗೆ ಇಲ್ಲಿ ಉತ್ತಮ ಗುಣಮಟ್ಟದ ಬಟ್ಟೆಗಳು ಸಿಗುತ್ತವೆ. ಈ ದೀಪಾವಳಿ ಸಂದರ್ಭದಲ್ಲಿ ಲಕ್ಷಾಂತರ ಜನರು ಜವಳಿ ಅಂಗಡಿಗಳಿಗೆ ಭೇಟಿ ಕೊಟ್ಟು ಬಟ್ಟೆಗಳನ್ನು ಖರೀದಿಸುತ್ತಾರೆ ಎಂದು ಹೇಳುತ್ತಾರೆ ಬಟ್ಟೆ ವ್ಯಾಪಾರಸ್ಥರು.ದೀಪಾವಳಿ ಸೇರಿದಂತೆ ನಾನಾ ಹಬ್ಬಗಳಿಗೆ ನಾವು ಗಂಗಾವತಿ ಸಿಲ್ಕ್ ಪಾಲೇಸ್‌ನಲ್ಲಿ ಸೀರೆ, ಮಕ್ಕಳ ಬಟ್ಟೆ ಖರೀದಿಸುತ್ತೇವೆ. ಹಬ್ಬದ ವೇಳೆ ನೂಕುನುಗ್ಗಲು ಇದ್ದರೂ ಗುಣಮಟ್ಟದ ಬಟ್ಟೆ ಪಡೆದ ಖುಷಿ ಇರುತ್ತದೆ ಎಂದು ನಿರ್ಮಲಾ ಉಳ್ಳಾಗಡ್ಡಿ ಹೇಳಿದರು.