ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಪರೀಕ್ಷೆ ಕುರಿತು ಭಯ ಬೇಡ, ಉತ್ತಮ ಸಾಧನೆ ಮಾಡಬೇಕೆಂಬುದನ್ನು ಸವಾಲಾಗಿ ಸ್ವೀಕರಿಸಿ. ಪೋಷಕರು, ಶಿಕ್ಷಕರು ನಿಮ್ಮ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಿ, ಶೇ.೧೦೦ ಸಾಧನೆಯ ದೊಡ್ಡಗುರಿ ನಿಮ್ಮ ಮುಂದಿರಲಿ ಎಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕಿವಿಮಾತು ಹೇಳಿದರು.ಜಿಲ್ಲೆಯ ಕೆಜಿಎಫ್ ನಗರದ ಸಂತ ಮೇರಿಸ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಪ್ರೇರಣಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಪರೀಕ್ಷಾ ಸವಾಲುಗಳನ್ನು ಸ್ವೀಕರಿಸಿ ಆದರೆ ಪರೀಕ್ಷೆಯ ಒತ್ತಡಕ್ಕೆ ಸಿಲುಕಬೇಡಿ ಎಂದ ಅವರು, ಎಸ್‌ಎಸ್ ಎಲ್.ಸಿ ಪರೀಕ್ಷೆಯನ್ನು ಎದುರಿಸಲಿರುವ ವಿಧ್ಯಾರ್ಥಿಗಳು ಒತ್ತಡದಿಂದ ಹೊರ ಬನ್ನಿ ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸಿ ಭಯ ವೆಂಬುದು ಮನುಷ್ಯನ ದೇಹದ ಒಂದು ಮೂಲೆಯಲ್ಲಿ ಇರಬೇಕು ಆದರೆ ಭಯವೇ ಎಲ್ಲವು ಆಗಬಾರದು ಪರೀಕ್ಷೆಯನ್ನು ಆನಂದಿಸೋಣಾ ಎಂದು ತಿಳಿಸಿದರು.ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ನೀವು ಯಾರಿಗಿಂತ ಕೀಳಲ್ಲ, ನಿಮ್ಮಲ್ಲೂ ಸಾಮರ್ಥ್ಯವಿದೆ ಎಂಬುದನ್ನು ಅರಿತುಕೊಳ್ಳಿ, ನಾವೂ ಸಾಧನೆ ಮಾಡಬಲ್ಲೆವು ಎಂಬ ಸಂಕಲ್ಪದೊಂದಿಗೆ ಇಂದಿನಿಂದ ಓದಿ, ಪರೀಕ್ಷೆಗೆ ಇರುವ ೩೮ ದಿನಗಳಲ್ಲಿ ನೀವು ಸಾಧಿಸಿ ತೋರಿಸಿ ಎಂದರು.ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರತಿ ವಿಧ್ಯಾರ್ಥಿಗೂ ಹೊಸ ತಿರುವು ನೀಡುತ್ತದೆ ಭಯ ಬಿಟ್ಟು ಪರೀಕ್ಷೆಗಳನ್ನು ಬರೆಯಿರಿ ಶ್ರದ್ಧೆ ಮತ್ತು ಸಮಯ ಪ್ರಜ್ಞೆಯಿಂದ ಓದಿದವರು ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ ಮನುಷ್ಯನಿಗೆ ಶಿಕ್ಷಣ ಮತ್ತು ಜೀವನದ ಪರೀಕ್ಷೆಗಳು ಎದರುರಾಗುತ್ತವೆ ಎರಡನ್ನು ಸಮಯದೊಂದಿಗೆ ದೃತಿಗೆಡದೆ ಎದುರಿಸಬೇಕು ಎಂದರು.ಪ್ರತಿಯೊಬ್ಬರಲ್ಲಿ ಪ್ರತಿಭೆ ಇರುತ್ತದೆ ಅಂತೆಯೇ ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಲ್ಲವು ನಿಮ್ಮ ಶ್ರಮದಿಂದ ಪಡೆದುಕೊಳ್ಳಬಹುದು ಎಂದು ಹೇಳಿ, ನಿಮ್ಮನ್ನು ಬೇರಾರಿಗೂ ಹೋಲಿಸಿಕೊಳ್ಳುವುದು ಬೇಡ ನಿಮ್ಮಲ್ಲಿ ಅಡಗಿರುವ ಶಕ್ತಿಯನ್ನು ಹೊರತನ್ನಿ, ನಾವು ಯಾರಿಗಿಂತ ಕಡಿಮೆಯಿಲ್ಲ ಎಂಬುದನ್ನು ಸಾಭೀತುಪಡಿಸಿ ಎಂದರು.ಪಠ್ಯದಲ್ಲಿನ ಯಾವುದೇ ಪ್ರಶ್ನೆಗೆ ನಾನು ಉತ್ತರಿಸಬಲ್ಲೇ ಎಂಬ ದೃಢವಿಶ್ವಾಸ ಮೂಡುವ ರೀತಿಯಲ್ಲಿ ನಿಮ್ಮ ಓದು ಇರಬೇಕು ಈಗಾಗಲೇ ಇಲಾಖೆಯಿಂದ ಮಾದರಿ ಪ್ರಶ್ನೆಪತ್ರಿಕೆ, ಪ್ರಶ್ನೋತ್ತರ ನೀಡಿದ್ದು, ಅದನ್ನು ನಿತ್ಯ ಬರೆದು ಅಭ್ಯಾಸ ಮಾಡಿ ಎಂದರು.ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಿ ಎಂದು ಶಿಕ್ಷಕರಿಗೆ ಸಲಹೆ ನೀಡಿದ ಡಿಸಿಯವರು, ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ತರಗತಿ ಕೊಠಡಿಯಲ್ಲಿ ನಿಮ್ಮ ಎಲ್ಲಾ ಆಲೋಚನೆ ಬದಿಗಿಡಿ, ಕೇವಲ ಶಿಕ್ಷಕರ ಮಾತು ಮಾತ್ರ ನಿಮ್ಮ ಕಿವಿಗೆ ಬೀಳುತ್ತಿರಬೇಕು ಅಂತಹ ಏಕಾಗ್ರತೆ ಸಾಧಿಸಿ ಎಂದರು.ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿಧ್ಯಾರ್ಥಿ ಜೀವನದ ಪ್ರಥಮ ಘಟ್ಟ ಅದನ್ನು ಗಣನೆಗೆ ತೆಗೆದುಕೊಂಡು ಪರೀಕ್ಷೆಯನ್ನು ಭಯಪಡದೇ ಸಂತೋಷದಿಂದ ಸಂಭ್ರಮಿಸಿ ತೇರ್ಗಡೆಯಾಗಬೇಕು ಆ ಮೂಲಕ ಹೆತ್ತವರ ಶಾಲೆಗೆ ಶಿಕ್ಷಕರ ಪ್ರೀತಿಗೆ ಪಾತ್ರರಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೋಲಾರ ಡಿಡಿಪಿಐ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯಿಂದ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಜಿಲ್ಲಾಡಳಿತದಿಂದ ನೀಡಿರುವ ಪರೀಕ್ಷಾ ದೀವಿಗೆ ಮಕ್ಕಳು ಬಳಸಿಕೊಳ್ಳುತ್ತಿದ್ದಾರೆ, ಶಾಲೆಗಳಲ್ಲಿ ಡಿಸೆಂಬರ್ ಅಂತ್ಯದೊಳಿಗೆ ಪಠ್ಯ ಮುಗಿಸಲಾಗಿದ್ದು, ಪುನರ್ಮನನ ಹಾಗೂ ಗುಂಪು ಅಧ್ಯಯನ, ವಿಶೇಷ ತರಗತಿಗಳುನಡೆಯುತ್ತಿದೆ, ಹಿಂದುಳಿದ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು. ನೀವು ಕಲಿಕೆಯಲ್ಲಿ ದೃಢತೆ ಸಾಧಿಸಿದರೆ ನೀವು ಹೆದರುವ ಅಗತ್ಯವೇ ಇಲ್ಲ, ಅದಕ್ಕಾಗಿಯೇ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ನಡೆಸುವ ಮೂಲಕ ನಿಮ್ಮಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ, ಜಿಲ್ಲಾಮಟ್ಟದ ಪೂರ್ವಸಿದ್ದತಾ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿರುವ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿಗಳಾದ ವೀಣಾ, ಸಗೀರಾ ಅಂಜುಂ, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ನಭಿಯಾ, ವಿಷಯ ಪರಿವೀಕ್ಷಕ ಶಂಕರೇಗೌಡ, ಉಪತಹಸೀಲ್ದಾರ್ ಹರಿಪ್ರಸಾದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹಾಜರಿದ್ದರು.