ಉಪ್ಪಾರ ಸಮಾಜ ಅಭಿವೃದ್ಧಿಗೆ 100 ಕೋಟಿ ನೀಡಿ

| Published : May 29 2024, 12:47 AM IST

ಸಾರಾಂಶ

ಉಪ್ಪಾರ ಸಮುದಾಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ರು. ಕೋಟಿ ರು. ಅನುದಾನ ನೀಡಬೇಕೆಂದು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಉಪ್ಪಾರ ಸಮುದಾಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ರು. ಕೋಟಿ ರು. ಅನುದಾನ ನೀಡಬೇಕೆಂದು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು ಆಗ್ರಹಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯದಲ್ಲಿ ಉಪ್ಪಾರ ಸಮಾಜವು ಸುಮಾರು 30 ಲಕ್ಷ ರು. ಜನಸಂಖ್ಯೆ ಇದ್ದೇವೆ. ನಮ್ಮ ಸಮಾಜಕ್ಕೆ ತನ್ನದೇ ಆದ ಇತಿಹಾಸ ಮತ್ತು ಸಾಮಾಜಿಕ, ಪೌರಾಣಿಕ ಹಿನ್ನೆಲೆ ಹೊಂದಿದೆ ಎಂದರು.

ಸಮುದಾಯ ಪ್ರವರ್ಗ-1 ರಲ್ಲಿ ಇದ್ದು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರ ಹಿಂದುಳಿದ ಜನಾಂಗವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ನಮ್ಮನ್ನಾಳಿದ ಸರಕಾರಗಳು ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯದಡಿಯಲ್ಲಿ ಮೂಲಭೂತ ಸವಲತ್ತು ನೀಡುವಲ್ಲಿ ವಂಚನೆ ಮಾಡುತ್ತಾ ಬಂದಿವೆ ಎಂದರು.

ಇತ್ತೀಚಿನ ಬೆಳವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಉಪ್ಪಾರ ಜನಾಂಗದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ರಾಜಕೀಯ ಪ್ರಾಧಾನ್ಯತೆ, ಉಪ್ಪಾರ ಅಭಿವೃದ್ಧಿ ನಿಗಮ ಸೇರಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮವಹಿಸಿರುವುದು ಸರಿಯಷ್ಟೆ. ಇದರ ಭಾಗವಾಗಿ ಉಪ್ಪಾರ ಜನಾಂಗದ ಪ್ರಮುಖ ಬೇಡಿಕೆಯಾದ "ಉಪ್ಪಾರ ಜನಾಂಗ " ವನ್ನು ಎಸ್.ಟಿ. ವರ್ಗಕ್ಕೆ ಸೇರಿಸುವಂತೆ ಮನವಿ ಮಾಡುತ್ತ 15 ವರ್ಷ ಕಳೆದಿದೆ ಎಂದರು.

ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಉಪ್ಪಾರ ಮತದಾರರು ಸುಮಾರು 1 ಲಕ್ಷ 50 ರು. ಸಾವಿರದಷ್ಟು ಇದ್ದು ತೀರ ಬಡತನ, ನಿರುದ್ಯೋಗದಿಂದ ಜೀವನ ಮಾಡುತ್ತಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಉಪ್ಪಾರ ಜನಾಂಗ ವಾಸಿಸುವ ಗ್ರಾಮ, ಪಟ್ಟಣಗಳಿಗೆ ಸರ್ಕಾರ ವಿಶೇಷ ಅನುಧಾನದಲ್ಲಿ ಮೂಲಭೂತ ಸವಲತ್ತು ಕಲ್ಪಿಸಲು ಸುಮಾರು 100 ಕೋಟಿ ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ನಿಗಮಕ್ಕೆ ಶೀಘ್ರವೇ ಅಧ್ಯಕ್ಷ ರನ್ನು ನೇಮಿಸಲಿ:

ರಾಜ್ಯದಲ್ಲಿ ಉಪ್ಪಾರ ನಿಗಮ ಸ್ಥಾಪನೆಗೊಂಡು ಸುಮಾರು 15 ವರ್ಷ ಕಳೆದಿದ್ದು, ಈ ನಿಗಮದಿಂದ ಅಭಿವೃದ್ಧಿ ಕುಂಠಿತವಾಗಿದ್ದು, ಇತ್ತೀಚೆಗೆ ಈ ನಿಗಮಕ್ಕೆ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಿರುವುದಿಲ್ಲ, ತಕ್ಷಣಕ್ಕೆ ಅಧ್ಯಕ್ಷರ ನೇಮಕ ಮಾಡಬೇಕು ಎಂದರು.

ಇದಕ್ಕೆ ಅನುಗುಣವಾಗಿ 100 ಕೋಟಿ ಅನುದಾನ ಮೀಸಲಿಟ್ಟು, ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು. ಮುಂಬರುವ ಸ್ಥಳೀಯ ಸಂಸ್ಥೆ, ಜಿಪಂ, ತಾಪಂ ಚುನಾವಣೆಗಳಲ್ಲಿ ಹೆಚ್ಚಿನ ಅವಕಾಶವನ್ನು ನಮ್ಮ ಜನಾಂಗಕ್ಕೆ ನೀಡಬೇಕೆಂದರು.ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ಆರ್.ಮಹದೇವಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್.ಮಹದೇವಸ್ವಾಮಿ, ನಿರ್ದೇಶಕ ಕೆಂಪನಪುರ ಮಹದೇವಶೆಟ್ಟಿ ಹಾಜರಿದ್ದರು.