ನೀರಿದ್ದರೂ ನೀಗದ ದಾಹ (ಕ್ಯಾಂಪೇನ್ ಸ್ಟೋರಿ-2)

ನೀರೆತ್ತುವ 3 ಘಟಕಗಳ ವಿದ್ಯುತ್ ಬಿಲ್ ಬಾಕಿ, ಎಡದಂಡೆ (ಗದಗ ಜಿಲ್ಲೆಯ) ₹29.65 ಕೋಟಿ ಬಾಕಿ

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಗದಗ ಮತ್ತು ವಿಜಯನಗರ ಜಿಲ್ಲೆಗಳ ರೈತರ ಬದುಕಿಗೆ ಆಸರೆಯಾಗಲೆಂದು ನಿರ್ಮಾಣ ಮಾಡಲಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮೂಲ ಸ್ವರೂಪಕ್ಕೆ ಧಕ್ಕೆ ಎದುರಾಗಿದೆ. ನದಿಯಿಂದ ನೀರೆತ್ತಲು ಬೇಕಾದ ವಿದ್ಯುತ್ ಬಾಕಿ ರೈತರನ್ನು ಭಯಬೀಳುವಂತೆ ಮಾಡಿದ್ದು, ಎಡದಂಡೆ ಹಾಗೂ ಬಲದಂಡೆ ವ್ಯಾಪ್ತಿಯ ನೀರೆತ್ತುವ ಘಟಕಗಳಿಗೆ ಸರಬರಾಜು ಮಾಡಲಾದ ವಿದ್ಯುತ್‌ ನ ₹117.08 ಕೋಟಿ ಬಾಕಿಯನ್ನು ನೀರಾವರಿ ನಿಗಮದ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದಾರೆ.


ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳು ಈಗಲೂ ಇದೊಂದು ಗಂಭೀರ ಸಮಸ್ಯೆಯೇ ಅಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಈಗಾಗಲೇ ವಿದ್ಯುತ್ ಸರಬರಾಜು ಕಂಪನಿಗಳು ಯಾವುದೇ ಕ್ಷಣದಲ್ಲಾದರೂ ಸಂಪರ್ಕ ಕಡಿತಗೊಳಿಸುವ ಗಂಭೀರ ಎಚ್ಚರಿಕೆ ನೀಡಿವೆ. ತೀವ್ರ ಬರಗಾಲ ಹಾಗೂ ನೀರಿನ ಅಭಾವ ಎದುರಿಸುತ್ತಿರುವ ಈ ಸಂದರ್ಭ ವಿದ್ಯುತ್ ಕಡಿತಗೊಂಡರೆ ಇಡೀ ಯೋಜನೆಯೇ ಸಂಪೂರ್ಣವಾಗಿ ಸ್ತಬ್ಧವಾಗಲಿದೆ.

ಗದಗ ಜಿಲ್ಲೆಯ ವ್ಯಾಪ್ತಿಯ 29.65 ಕೋಟಿ ಬಾಕಿ:

ಯೋಜನೆಯ ಎಡದಂಡೆ ಭಾಗದಲ್ಲಿ ಬರುವ ಮುಂಡರಗಿ, ಗದಗ, ಕಲಕೇರಿ, ಹಿರೇವಡ್ಡಟ್ಟಿ, ವಿರೂಪಾಪುರ, ಮುಷ್ಠಿಕೊಪ್ಪ ಹಾಗೂ ಡಂಬಳ ನೀರೆತ್ತುವ ಘಟಕಗಳಿಗೆ ಸರಬರಾಜು ಮಾಡಿದ ವಿದ್ಯುತ್‌ನಿಂದ ₹29.65 ಕೋಟಿ ಬಾಕಿ ಉಳಿದಿದೆ. ಆಗಸ್ಟ್ 2023ರಿಂದ ಏಪ್ರಿಲ್ 2026ರ ವರೆಗಿನ ಅವಧಿಯಲ್ಲಿನ ಒಟ್ಟು ಬಾಕಿ ಇದಾಗಿದ್ದು ಈ ಬೃಹತ್ ಮೊತ್ತವನ್ನು ಪಾವತಿಸಲು ಕರ್ನಾಟಕ ನೀರಾವರಿ ನಿಗಮಕ್ಕೆ (ಕೆಎನ್‌ಎನ್‌ಎಲ್) ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದೆ. ಈ ಕುರಿತು ಈಗಾಗಲೇ ಹೆಸ್ಕಾಂ ಅಧಿಕಾರಿಗಳು ಸಂಬಂಧಪಟ್ಟ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆದಿದ್ದು, ತಕ್ಷಣವೇ ಪೂರ್ಣ ಬಿಲ್ ಪಾವತಿಸದಿದ್ದರೆ ಪಂಪ್‌ ಹೌಸ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯ ಎನ್ನುವುದನ್ನು ಕೂಡಾ ಸ್ಪಷ್ಟ ಪಡಿಸಿದ್ದಾರೆ.

2012ರಲ್ಲಿಯೇ ಲೋಕಾರ್ಪಣೆ:

ಸಿಂಗಟಾಲೂರು ಏತ ನೀರಾವರಿ ಯೋಜನೆಯು 2012ರಲ್ಲೇ ಲೋಕಾರ್ಪಣೆಗೊಂಡು ಮೊದಲು ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ಹಾಗೂ ಕೆರೆಗಳಿಗೆ ನೀರು ಹರಿಸಲಾಗುತ್ತಿತ್ತು, ನಂತರ ಅದನ್ನು ಪರಿಷ್ಕರಿಸಿ ಸೂಕ್ಷ್ಮ ನೀರಾವರಿ (ಹನಿ ನೀರಾವರಿ ಯೋಜನೆಯನ್ನಾಗಿ) ಮಾರ್ಪಾಡು ಮಾಡಲಾಗಿದೆ. ಅಂದಿನಿಂದ ಇಂದಿನವರೆಗೂ, ದಶಕ ಕಳೆದರೂ ಸರ್ಕಾರ ಇದನ್ನು ಅಧಿಕೃತ ನೀರಾವರಿ ಪ್ರದೇಶವೆಂದು ಘೋಷಣೆ ಮಾಡದಿರುವುದೇ, ಯೋಜನಾ ವ್ಯಾಪ್ತಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚಿಸದೇ ಇರುವುದರ ಪರಿಣಾಮವಾಗಿ, ಕಾಲುವೆಗಳ ನಿರ್ವಹಣೆ, ಪೈಪ್‌ ಲೈನ್‌ಗಳ ದುರಸ್ತಿ ಹಾಗೂ ವಿದ್ಯುತ್ ಬಿಲ್ ಪಾವತಿಗೆ ಸರ್ಕಾರ ಸಕಾಲದಲ್ಲಿ ಅನುದಾನ ನೀಡದೆ ಇರುವುದನ್ನು ನೋಡಿದಲ್ಲಿ ಸರ್ಕಾರಕ್ಕೆ ಈ ಯೋಜನೆಯೇ ಬೇಡವಾಗಿದೆಯೇ ಎನ್ನುವ ಜಿಜ್ಞಾಸೆ ಪ್ರಾರಂಭವಾಗಿದೆ.ನದಿ ಪಾತ್ರದಲ್ಲಿ ನೀರು ಲಭ್ಯವಿರುವ ಸಂದರ್ಭದಲ್ಲಿಯೇ ಪಂಪ್‌ ಗಳ ಮೂಲಕ ಕೆರೆಗಳನ್ನು ಭರ್ತಿ ಮಾಡಿಕೊಂಡಿದ್ದರೆ ಅಂತರ್ಜಲ ವೃದ್ಧಿಸಿ, ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗುತ್ತಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳ ನಿಷ್ಕ್ರಿಯತೆ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಜನತೆಗೆ ಘೋರ ಅನ್ಯಾಯವಾಗುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ವಿಶೇಷ ಅನುದಾನದ ಮೂಲಕ ವಿದ್ಯುತ್ ಬಾಕಿ ಚುಕ್ತಾ ಮಾಡಬೇಕು ಎನ್ನುತ್ತಾರೆ ಮುಂಡರಗಿ ಸಾಮಾಜಿಕ ಹೋರಾಟಗಾರ ವೈ.ಎನ್. ಗೌಡರ.ವಿದ್ಯುತ್ ಬಾಕಿ ಉಳಿಸಿಕೊಂಡಿರುವುದು, ಇರುವ ಮೋಟರ್‌ಗಳನ್ನು ರಿಪೇರಿ ಮಾಡಿಸದೇ, ಅನುದಾನದ ಕೊರತೆ ನೆಪದಲ್ಲಿ ನದಿಪಾತ್ರದಲ್ಲಿ ನೀರಿದ್ದರೂ ಬರಗಾಲದಂತಹ ಸಂಕಷ್ಟ ಸಂದರ್ಭ ರೈತರಿಗೆ ನೆರವಾಗಬೇಕಾದ ಕೆಎನ್ಎನ್ಎಲ್ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಖಂಡನೀಯ. ಸರ್ಕಾರ ಕೂಡಲೇ ಗಮನ ಹರಿಸಬೇಕು ಎನ್ನುತ್ತಾರೆ ಗದಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ.