ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲೆಯಲ್ಲಿ ಈಗಾಗಲೇ ವಿವಿಧೆಡೆ ಹಂಚಿಕೆ ಮಾಡಿರುವ ನಿವೇಶನಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಕೇಳಿಬರುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾವೇರಿ: ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲೆಯಲ್ಲಿ ಈಗಾಗಲೇ ವಿವಿಧೆಡೆ ಹಂಚಿಕೆ ಮಾಡಿರುವ ನಿವೇಶನಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಕೇಳಿಬರುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಗೃಹ ಮಂಡಳಿಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ವಿಳಂಬ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯ ಪ್ರತಿಯೊಂದು ತಾಲೂಕುಗಳಲ್ಲಿಯೂ ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನಗಳನ್ನು ಹಂಚಿಕೆ ಮಾಡಲು ಅಗತ್ಯವಿರುವ ಪ್ರಸ್ತಾವನೆಗಳನ್ನು ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೂಕ್ತ ಬೆಲೆಯಲ್ಲಿ ನಿವೇಶನ ಒದಗಿಸುವುದು ಮಂಡಳಿಯ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಪ್ರತಿಯೊಂದು ಹಂತದಲ್ಲಿಯೂ ತ್ವರಿತವಾಗಿ ಕ್ರಮವಹಿಸುವ ಮೂಲಕ ಮಂಡಳಿಯ ಯೋಜನೆಗಳಲ್ಲಿ ಪ್ರಗತಿ ಸಾಧಿಸಬೇಕು ಎಂದರು.ಗೃಹ ಮಂಡಳಿಯಿಂದ ಕೈಗೊಳ್ಳಲಾಗುತ್ತಿರುವ ವಸತಿ ಹಾಗೂ ನಿವೇಶನ ಅಭಿವೃದ್ಧಿ ಕಾಮಗಾರಿಗಳು ವರ್ಷಗಟ್ಟಲೆ ವಿಳಂಬವಾಗದಂತೆ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ನಿವೇಶನ ವಿನ್ಯಾಸಕ್ಕೆ ಅನುಮೋದನೆ ದೊರೆತ ತಕ್ಷಣವೇ ಕೆಜಿಪಿಗೆ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಬೇಕು. ಅನುಮೋದನೆಯ ನಂತರವೂ ಕಡತಗಳನ್ನು ಅನಗತ್ಯವಾಗಿ ವಿಳಂಬ ಮಾಡುವುದು ಅಥವಾ ಪ್ರಕ್ರಿಯೆಯನ್ನು ಮುಂದೂಡಬಾರದು ಪ್ರತಿಯೊಂದು ಹಂತದಲ್ಲಿಯೂ ತ್ವರಿತವಾಗಿ ಕ್ರಮವಹಿಸಿ ಯೋಜನೆಗಳ ಅನುಷ್ಠಾನದಲ್ಲಿ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಗೃಹ ಮಂಡಳಿಯ ವಿವಿಧ ಯೋಜನೆಗಳು, ನಿವೇಶನ ಹಂಚಿಕೆ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಬಾಕಿ ಇರುವ ಪ್ರಕ್ರಿಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಮಾರ್ಗದರ್ಶನ ನೀಡಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರ ಹರೀಶ್, ತಹಸೀಲ್ದಾರ್ ಶರಣಮ್ಮ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.