ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಜಿಲ್ಲೆಯ 22 ರೈತರಿಗೆ ಇನ್ನೂ ಒಟ್ಟೂ ₹12 ಕೋಟಿ ಸಾಲಮನ್ನಾದ ಹಣ ಬಿಡುಗಡೆ ಆಗಬೇಕಿದ್ದು, ಅನಿವಾರ್ಯವಾಗಿ ತಮ್ಮ ಸಾಲದ ಹಣಕ್ಕೆ ಬಡ್ಡಿಯನ್ನೂ ತುಂಬುತ್ತಿದ್ದಾರೆ. ಈ ಹಣ ಬಿಡುಗಡೆಗೆ ಪ್ರಯತ್ನಿಸುತ್ತಿದ್ದೇವೆ. ರಾಜ್ಯಾದ್ಯಂತ ರೈತರಿಗೆ ಇನ್ನೂ ₹299 ಕೋಟಿಯಷ್ಟು ಬಿಡುಗಡೆ ಆಗಬೇಕಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.ನಗರದ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ 105 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಬನವಾಸಿ ಸಹಕಾರಿ ಸಂಘದ ನಿರ್ದೇಶಕ ವಿನಯ ಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ರೈತರಿಗೆ ತಲಾ ಒಂದು ಲಕ್ಷ ರೂ. ಸಾಲ ಮನ್ನಾ ಮಾಡಿದ್ದರು. ಈ ಹಣ ಜಿಲ್ಲೆಯ ಬಹುತೇಕ ಎಲ್ಲ ರೈತರಿಗೆ ತಲುಪಿದೆ. ಆದರೆ ಇನ್ನೂ 12 ಕೋಟಿ ಬಾಕಿ ಇದೆ. ಅದನ್ನು ಬಿಡುಗಡೆಗೆ ಪ್ರಯತ್ನಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕಾತೂರು ಸಹಕಾರಿ ಸಂಘದ ಚಂದ್ರಕಾಂತ ಮಾತನಾಡಿ, ರಾಜ್ಯ ಸರ್ಕಾರ ಬೆಳೆಸಾಲ ₹5 ಲಕ್ಷವರೆಗೆ ಶೂನ್ಯಬಡ್ಡಿದರಲ್ಲಿ ಸಾಲ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮುಂಡಗೋಡ ತಾಲೂಕಿನಲ್ಲಿ 2 ಹೊಸದಾಗಿ ಶಾಖೆ ಆರಂಭಗೊಳಿಸಿರುವುದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ ಎಂದಾಗ ಪ್ರತಿಕ್ರಿಯಿಸಿದ ಹೆಬ್ಬಾರ್, ರಾಜ್ಯ ಸರ್ಕಾರ ನಿರ್ಣಯವನ್ನು ವಿಧಾನಸಭೆ ಒಳಗಡೆ ಮಾಡುತ್ತದೆ. ಸಂಪನ್ಮೂಲದ ಬಗ್ಗೆ ವಿಚಾರ ಮಾಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳಿಗೆ ಒಂದೇ ಒಂದು ರೂ. ಸಹಾಯ ಮಾಡುವುದಿಲ್ಲ. ಕೃಷಿ ಹಾಗೂ ಕೃಷಿಯೇತರ ಸಾಲ ನಿರ್ದಿಷ್ಟ ಪ್ರಮಾಣದಲ್ಲಿ ಹಂಚಿಕೆ ಮಾಡದಿದ್ದರೆ ಸಿಬ್ಬಂದಿಗೆ ವೇತನ ನೀಡುವುದು ಕಷ್ಟವಾಗುತ್ತದೆ ಎಂದರು.ಕೆಡಿಸಿಸಿಗೆ 209 ಹೊಸ ಸದಸ್ಯರು ಸೇರ್ಪಡೆಗೊಂಡಿದ್ದು, ಬಡವರ ಮನೆ ನಿರ್ಮಾಣ, ಶಿಕ್ಷಣ, ಜಮೀನು ಖರೀದಿಗೆ ಸಾಲದ ಯೋಜನೆ ತಂದಿದ್ದೇವೆ. ಶಿಕ್ಷಣಕ್ಕೆ ನೀಡುವ ಸಾಲದ ಬಡ್ಡಿ ಕಡಿಮೆ ಮಾಡುವ ದಿಕ್ಕಿನಲ್ಲಿ ಹೆಜ್ಜೆ ಇಡುತ್ತೇವೆ. ಹಿಂದೆಲ್ಲ ಶೇ. 6.5 ಡಿವಿಡೆಂಡ್ ಇತ್ತು. ಈ ವರ್ಷ 8 ಪ್ರತಿಶತ ಏರಿಸಲಾಗಿದೆ. 4 ಸಂಘಗಳಿಗೆ ಆಡಳಿತ ಮಂಡಳಿ ಇಲ್ಲದಿರುವುದರಿಂದ ನೇರವಾಗಿ ರೈತರಿಗೆ ಸಾಲ ನೀದ್ದೇವೆ. ಸಾಲವನ್ನೂ ವಸೂಲಾತಿ ಮಾಡಿದ್ದೇವೆ ಎಂದರು.
ಟಿಎಸ್ ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿದರು.ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ನಿರ್ದೇಶಕರಾದ ಎಸ್.ಎಲ್. ಘೋಟ್ನೇಕರ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಗಜಾನನ ಪೈ, ಎಲ್.ಟಿ. ಪಾಟೀಲ, ಶಿವಾನಂದ ಹೆಗಡೆ ಕಡತೋಕಾ, ಆರ್.ಎಂ. ಹೆಗಡೆ ಬಾಳೇಸರ, ರಾಮಕೃಷ್ಣ ಹೆಗಡೆ ಕಡವೆ, ಕೃಷ್ಣ ದೇಸಾಯಿ, ರಾಘವೇಂದ್ರ ಶಾಸ್ತ್ರಿ, ಪ್ರಕಾಶ ಗುನಗಿ, ಬೀರಣ್ಣ ನಾಯಕ, ಗಣಪತಿ ಹೆಗಡೆ ಸೋಂದಾ, ವಿಶ್ವನಾಥ ಭಟ್ಟ, ಪ್ರಮೋದ ದವಳೆ, ವೃತ್ತಿಪರ ನಿರ್ದೇಶಕ ತಿಮ್ಮಯ್ಯ ಹೆಗಡೆ ಮತ್ತಿತರರು ಇದ್ದರು. ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ ಸ್ವಾಗತಿಸಿದರು. ಅನಿತಾ ಭಟ್ಟ ನಿರೂಪಿಸಿದರು.