ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದೇಶಕ್ಕಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಯ ಮೇರೆಗೆ ಕೇಂದ್ರ ಸರ್ಕಾರವು 14 ಕೋಟಿ ರು. ಮಂಜೂರು ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಕಲ್ಪಿಸುವ ಉದೇಶಕ್ಕಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಯ ಮೇರೆಗೆ ಕೇಂದ್ರ ಸರ್ಕಾರವು 14 ಕೋಟಿ ರು. ಮಂಜೂರು ಮಾಡಿದೆ.

ಜಿಲ್ಲೆಯಲ್ಲಿ ಕ್ರೀಡಾ ಸೌಕರ್ಯ ಉತ್ತಮಪಡಿಸುವ ನಿಟ್ಟಿನಲ್ಲಿ ಸಚಿವ ಕುಮಾರಸ್ವಾಮಿ ಅವರು ಕೇಂದ್ರದ ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದು ವಿನಂತಿಸಿದ್ದರು.

ತಕ್ಷಣವೇ ಮನವಿಗೆ ಸ್ಪಂದಿಸಿರುವ ಕ್ರೀಡಾ ಸಚಿವರು, ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಬಹುಪಯೋಗಿ ಕ್ರೀಡಾ ಸೌಲಭ್ಯ ನಿರ್ಮಾಣಕ್ಕೆ 14 ಕೋಟಿ ರು. ಮಂಜೂರು ಮಾಡಿ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ.

ಜಿಲ್ಲೆಯ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಅನೇಕ ಯುವ ಪ್ರತಿಭೆಗಳು ಜಿಲ್ಲೆಯಲ್ಲಿ ಅವಕಾಶ ಸಿಗದೆ ಹೊರ ಭಾಗಗಳಲ್ಲಿ ತರಬೇತಿಗೆ ಹೋಗುತ್ತಿದ್ದಾರೆ. ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಂತಹ ಸೌಕರ್ಯವನ್ನು ಮಂಡ್ಯದಲ್ಲಿಯೇ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದು ಉತ್ತಮ ಯೋಜನೆಯಾಗಿದೆ. ನನ್ನ ಮನವಿಗೆ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

ಜಿಲ್ಲೆಯ ಕ್ರೀಡೆಗೆ ಬಹುದೊಡ್ಡ ಉತ್ತೇಜನ:

ಕೇಂದ್ರದ ಮೋದಿ ಅವರ ನೇತೃತ್ವದ ಸರ್ಕಾರವು ದೇಶದ ಉದ್ದಗಲಕ್ಕೂ ಜಾಗತಿಕ ಗುಣಮಟ್ಟದ ಕ್ರೀಡಾ ಸೌಕರ್ಯ ಅಭಿವೃದ್ಧಿಪಡಿಸಿ ಗ್ರಾಮೀಣ ಮಟ್ಟದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ಯೋಜನೆಯ ಭಾಗವಾಗಿ ಮಂಡ್ಯದಲ್ಲಿ 14 ಕೋಟಿ ರು. ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯವನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬಹುಪಯೋಗಿ ಕ್ರೀಡಾ ಸೌಲಭ್ಯಕ್ಕೆ ಈಗ ಅನುಮೋದನೆ ದೊರೆತಿರುವುದರಿಂದ ಮಂಡ್ಯ ಕ್ರೀಡಾ ಅಭಿವೃದ್ಧಿ ಮತ್ತು ಉತ್ತೇಜನದಲ್ಲಿ ಹೊಸ ಯುಗಕ್ಕೆ ನಾಂದಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ ಕೇಂದ್ರ ಸಚಿವರು; ಈ ಕ್ರೀಡಾ ಸಮುಚ್ಚಯದಲ್ಲಿ ಯುವ ಕ್ರೀಡಾಪಟುಗಳ ತರಬೇತಿ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವುದು, ಸಾರ್ವಜನಿಕರಲ್ಲಿ ಫಿಟ್‌ನೆಸ್ ಅನ್ನು ಉತ್ತೇಜಿಸುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಈ ಮಂಜೂರಾತಿಯು ಮಂಡ್ಯಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದರು.

ಕೃಷಿ ಆಧರಿತವಾದ ಮಂಡ್ಯ ಜಿಲ್ಲೆಯೂ ಪ್ರತಿಭೆಗಳ ಆಗರ. ಆನೇಕ ಪ್ರತಿಭಾವಂತರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡೆಯನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಆರೋಗ್ಯವಂತ ಸಶಕ್ತ ಮಂಡ್ಯ ಜಿಲ್ಲೆ ನಿರ್ಮಾಣಕ್ಕೆ ಈ ಯೋಜನೆ ಪೂರಕವಾಗಿದೆ. ಇದು ಪ್ರಧಾನಿ ಮೋದಿ ಅವರ ಕನಸು ಕೂಡ ಆಗಿದೆ ಎಂದು ಸಚಿವರು ಹೇಳಿದ್ದಾರೆ.ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯಕ್ಕೆ ಈ ಮಹತ್ವದ ಯೋಜನೆಯನ್ನು ಮಂಜೂರು ಮಾಡಿದ್ದಕ್ಕಾಗಿ ಮತ್ತು ತ್ವರಿತ ನಿರ್ಧಾರ ಕೈಗೊಂಡಿದ್ದಕ್ಕಾಗಿ ಕೇಂದ್ರ ಕ್ರೀಡಾ ಸಚಿವ ಡಾ.ಮನ್ಸುಖ್ ಮಾಂಡವಿಯ ಅವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಆರೋಗ್ಯ, ಸಶಕ್ತ ಮಂಡ್ಯ ನಿರ್ಮಾಣಕ್ಕಾಗಿ ಇದು ಬಹುದೊಡ್ಡ ಯೋಗದಾನ ಆಗುತ್ತದೆ.

-ಎಚ್.ಡಿ. ಕುಮಾರಸ್ವಾಮಿ, ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು, ಭಾರತ ಸರ್ಕಾರ