ಮೂಲಸೌಕರ್ಯ ಕಾಮಗಾರಿಗೆ 15 ದಿನ ಗಡುವು
KannadaprabhaNewsNetwork | Published : Oct 06 2023, 01:12 AM IST
ಮೂಲಸೌಕರ್ಯ ಕಾಮಗಾರಿಗೆ 15 ದಿನ ಗಡುವು
ಸಾರಾಂಶ
ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ಸಾಗರ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ₹10 ಕೋಟಿ ರು. ವೆಚ್ಚದಲ್ಲಿ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಇನ್ನು 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಸಂಬಂಧಿಸಿದ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವುದು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಾಕೀತು ಮಾಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ 189ನೇ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ 22ನೇ ಕೈಗಾರಿಕಾ ಸ್ಪಂದನಾ ಸಭೆಯಲ್ಲಿ ಅವರು ಮಾತನಾಡಿ, ಈ ಕಾಮಗಾರಿ ಸಂಬಂಧ ಉಸ್ತುವಾರಿ ಅಧಿಕಾರಿಗೆ ನೋಟೀಸ್ ಜಾರಿಗೊಳಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಅವರಿಗೆ ಸೂಚಿಸಿದರು. ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಪಾಲಿಕೆ ವತಿಯಿಂದ ಕಸದ ವಿಲೇವಾರಿ ಆಗುತ್ತಿದೆ. ಪ್ರಸ್ತುತ 24/7 ನೀರಿನ ಸಂಪರ್ಕದ ಕೊರತೆಯಿದ್ದು, ಅದನ್ನು ಮಹಾನಗರ ಪಾಲಿಕೆ ವತಿಯಿಂದ ಮುಂದಿನ ಕೆಲವು ದಿನಗಳೊಳಗಾಗಿ ಒದಗಿಸಲು ಕ್ರಮ ವಹಿಸಲಾಗುವುದು. ವಸಾಹತು ಮುಂಭಾಗದ ಮುಖ್ಯ ರಸ್ತೆಯಲ್ಲಿ ಟ್ರಕ್ ಹಾಗೂ ಇತರೆ ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಆಕಸ್ಮಿಕ ಅಪಘಾತಗಳು ಸಂಭವಿಸುತ್ತಿವೆ ಎಂಬ ಬಗ್ಗೆ ಆರೋಪಗಳಿವೆ. ಈ ಸಂಬಂಧ ಕೈಗಾರಿಕೋದ್ಯಮಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಉಪಸ್ಥಿತಿಯಲ್ಲಿ ಶೀಘ್ರದಲ್ಲಿ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ನಗರದ ಹೊರವಲಯ ನಿದಿಗೆಯ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಎಕ್ಸ್‌ಪೋಟ್ಸ್, ಕೈಗಾರಿಕಾ ಘಟಕದ ಮಾಲಿನ್ಯದಿಂದ ವಾತಾವರಣ ನಿರಂತರವಾಗಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಪಡೆದು ನಿಯಮಾನುಸಾರ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು. ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿ ಉತ್ಪನ್ನ ತಯಾರಿಸಲು ಹಾಗೂ ಘಟಕಕ್ಕೆ ಮುಂದಾಗಿರುವ 50 ಎಚ್.ಪಿ. ವಿದ್ಯುತ್‍ಗೆ ಹೆಚ್ಚುವರಿಯಾಗಿ 150 ಎಚ್.ಪಿ. ವಿದ್ಯುತ್ ಮಂಜೂರಾತಿಗಾಗಿ ಕೋರಿಕೆ ಸಲ್ಲಿಸಿರುತ್ತಾರೆ. ಅಲ್ಲದೇ, ಅಲ್ಲಿನ ಎಸ್.ಜಿ.ಕೆ. ಇಂಡಸ್ಟ್ರಿಸ್ ಹೆಸರನ್ನು ಬದಲಾಯಿಸಿಕೊಳ್ಳಲು ಅನುಮತಿ ನೀಡುವಂತೆ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ರಹಮಾನಿಯ ಕಾಂಕ್ರೀಟ್ ಪ್ರೊಡಕ್ಟ್ ಘಟಕಕ್ಕೆ ಹೆಚ್ಚಿನ ವಿದ್ಯುತ್ ಸರಬರಾಜು ಮಾಡುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯುವಂತೆ ಸೂಚಿಸಿದರು. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನ ಹಂಚಿಕೆಗೆ ಪಡೆದು ಮಂಡಳಿಯ ನಿಯಮಾನುಸಾರ ಘಟಕ ಸ್ಥಾಪಿಸದಿರುವವರಿಗೆ ಮೂರು ತಿಂಗಳ ಕಾಲಾವಕಾಶ ನೀಡಿ ತಿಳಿವಳಿಕೆ ನೀಡುವಂತೆ ಹಾಗೂ ಡಿಸೆಂಬರ್ 31ರೊಳಗೆ ಪ್ರತಿಕ್ರಿಯಿಸದಿದ್ದಲ್ಲಿ ಮಾಲೀಕತ್ವವನ್ನು ಪರಭಾರೆ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಪ್ರದೇಶಾಭಿವೃದ್ಧಿ ಸಮಿತಿ ನೋಡಲ್ ಅಧಿಕಾರಿ ಎಚ್.ಆರ್. ರಾಜಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಸೇರಿದಂತೆ ವಿವಿಧ ಕೈಗಾರಿಕಾ ಸಂಘಗಳ ಅಧ್ಯಕ್ಷರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸಸ್ಥಿತರಿದ್ದರು. - - - -5ಎಸ್‌ಎಂಜಿಕೆಪಿ08: ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ 189ನೇ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಜಿಲ್ಲಾಮಟ್ಟದ 22ನೇ ಕೈಗಾರಿಕಾ ಸ್ಪಂದನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಮಾತನಾಡಿದರು.