ಮೀಸಲ್ಸ್ ರುಬೆಲ್ಲಾ ರೋಗ ವಿರುದ್ಧ ಅಗತ್ಯ ಕ್ರಮ ಜರುಗಿಸಿ
KannadaprabhaNewsNetwork | Published : Oct 06 2023, 01:12 AM IST
ಮೀಸಲ್ಸ್ ರುಬೆಲ್ಲಾ ರೋಗ ವಿರುದ್ಧ ಅಗತ್ಯ ಕ್ರಮ ಜರುಗಿಸಿ
ಸಾರಾಂಶ
ಲಸಿಕೆ ವಂಚಿತ ಮಕ್ಕಳು, ಗರ್ಭಿಣಿಯರಿಗೆ ನೀಡುವ ಲಸಿಕೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಲಸಿಕಾ ವಂಚಿತ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ನೀಡುವ ಜೊತೆಗೆ ಮೀಸಲ್ಸ್ ರುಬೆಲ್ಲಾ ರೋಗವನ್ನು ನಿರ್ಮೂಲನೆ ಮಾಡಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೂಚಿಸಿದರು. ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 3ನೇ ಸುತ್ತಿನ ಮಿಷನ್ ಇಂದ್ರಧನುಷ್ 5.0 (ಐಎಂಐ 5.0) ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ಧ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ಕಾಲ ಕಾಲಕ್ಕೆ ಪಡೆಯದೇ ವಂಚಿತರಾದ 5 ವರ್ಷದೊಳಗಿನ ಮಕ್ಕಳನ್ನು ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕುವುದು ಈ ಕಾರ್ಯಕ್ರಮದ ಉದ್ದೇಶ ಎಂದರು. ಅ.9 ರಿಂದ 14 ರವರೆಗೆ ನಡೆಯುವ 3ನೇ ಸುತ್ತಿನ ಸಾರ್ವತ್ರಿಕ ಲಸಿಕಾರಣದಲ್ಲಿ ಶೇ.100 ಪ್ರಗತಿ ಸಾಧಿಸಬೇಕು. ಅದಕ್ಕೆ ಅಗತ್ಯವಾದ ಮೈಕ್ರೋಪ್ಲಾನ್ ಸಿದ್ಧಪಡಿಸಿ, ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ನಗರ ಪ್ರದೇಶದಲ್ಲಿ ವಿಶೇಷವಾಗಿ ಸ್ಲಂಗಳು, ವಲಸಿಗರು ವಾಸಿಸುವ ಸ್ಥಳಗಳು, ಪೆರಿಅರ್ಬನ್ ಪ್ರದೇಶಗಳನ್ನು ಗುರುತಿಸಿ ಅಲ್ಲಿಯ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಬೇಕು ಎಂದು ತಿಳಿಸಿದರು. ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅವರ ಸಹಕಾರದೊಂದಿಗೆ ಲಸಿಕಾಕರಣವನ್ನು ಯಶಸ್ವಿಗೊಳಿಸಬೇಕು. ಶಾಲೆಗಳಲ್ಲಿ ಪ್ರಾರ್ಥನೆ ವೇಳೆ ಲಸಿಕೆಗಳ ಕುರಿತು ಮಾಹಿತಿ ನೀಡಬೇಕು. ಹಾಗೂ ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಮಕ್ಕಳ ವಿವರ ನೀಡುವುದರೊಂದಿಗೆ ಬಿಟ್ಟುಹೋದ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು. ಮೀಸಲ್ಸ್-ರುಬೆಲ್ಲಾ (ಎಂಆರ್) ರೋಗವನ್ನು ಪೋಲಿಯೋ ರೋಗದಂತೆ ನಿರ್ಮೂಲನೆ ಮಾಡಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಈ ರೋಗದ ವಿರುದ್ದ ಲಸಿಕೆ ಹಾಕಿಸಿಕೊಳ್ಳಲು ಉತ್ತಮ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಎಲ್ಲ ತಾಲೂಕು ವೈದ್ಯಾಧಿಕಾರಿಗಳು ಎಂಆರ್ ಮತ್ತು ಸಾರ್ವತ್ರಿಕ ಲಸಿಕಾ ಗುರಿಯನ್ನು ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಡಬ್ಲ್ಯುಎಚ್‌ಒ ಕನ್ಸಲ್ಟೆಂಟ್ ಡಾ.ಅನಂತೇಶ್ ಮಾತನಾಡಿ, ಜಿಲ್ಲೆಯಲ್ಲಿ ಎಂಆರ್ ಮೊದಲ ಮತ್ತು ಎರಡನೇ ಡೋಸ್ ಲಸಿಕೆಯಲ್ಲಿ ಜಿಲ್ಲೆ ಶೇ.95 ಪ್ರಗತಿ ಸಾಧಿಸಿದೆ. ಹೊಸನಗರ, ಸೊರಬ, ಸಾಗರ ಮತ್ತು ಶಿಕಾರಿಪುರ ಇನ್ನೂ ಸ್ವಲ್ಪ ಪ್ರಗತಿ ಸಾಧಿಸಬೇಕಿದೆ. ಲಸಿಕಾಕರಣ ಕಾರ್ಯಕ್ರಮಗಳಿಗೆ ಅಂತರ ಇಲಾಖೆಗಳ ಸಹಕಾರ ಮತ್ತು ಐಇಸಿ ಚಟುವಟಿಕೆಗಳು ಪರಿಣಾಮಕಾರಿಯಾಗಬೇಕು. ಜ್ವರ ಮತ್ತು ದದ್ದು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಶೇಷವಾಗಿ ಗರ್ಭಿಣಿಯರಿಗೆ ಈ ಲಕ್ಷಣಗಳು ಕಂಡುಬಂದಲ್ಲಿ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಗ್ರಾಮ ಸಭೆ, ತಾಯಂದಿರ ಸಭೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಆರ್‌ಸಿಎಚ್ ಅಧಿಕಾರಿ ಡಾ.ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ (ಮೀಸಲ್ಸ್ ರುಬೆಲ್ಲಾ) ಎಂಆರ್-1 ಮತ್ತು ಎಂಆರ್-2 ಲಸಿಕಾಕರಣ ಶೇ.95 ಪ್ರಗತಿಯಾಗಿದೆ. ಎರಡನೇ ಸುತ್ತಿನ ಇಂದ್ರ ಧನುಷ್ ಕಾರ್ಯಕ್ರಮದಲ್ಲಿ ವರ್ಷದೊಳಗಿನ ಮಕ್ಕಳ ಲಸಿಕಾ ಪ್ರಗತಿ ಶೇ.94.63, 1 ವರ್ಷ ಮೇಲ್ಪಟ್ಟ ಮಕ್ಕಳ ಶೇ. 87.93, 5 ವರ್ಷದಪಳಗಿನ ಮಕ್ಕಳ ಲಸಿಕೆಯಲ್ಲಿ ಶೇ.93.23, ಗರ್ಭಿಣಿಯರ ಲಸಿಕೆ ಶೇ.99.46 ಆಗಿದೆ ಎಂದು ಮಾಹಿತಿ ನೀಡಿದರು. ಮೈಕ್ರೋಪ್ಲಾನ್ ಸಿದ್ಧ: ಮೂರನೇ ಸುತ್ತಿನ ಲಸಿಕಾಕರಣ ಮೈಕ್ರೊಪ್ಲಾನ್ ಸಿದ್ಧವಾಗಿದೆ. ಲಸಿಕಾ ವಂಚಿತರನ್ನು ಗುರುತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಜಂಟಿ ಸರ್ವೇ ಆಗುತ್ತಿದೆ. ಹೈರಿಸ್ಕ್ ಏರಿಯಾಗಳಾದ ಸ್ಲಂ, ವಲಸಿಗರ ವಾಸಸ್ಥಳ, ನಗರ ಸಮೀಪ ಪ್ರದೇಶಗಳು, ಇನ್ನಿತರೆ ಸ್ಥಳಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳು ಟಾಂ ಟಾಂ, ಜಿಂಗಲ್ಸ್ ಮೂಲಕ ಲಸಿಕಾಕರಣದ ಕುರಿತು ಹೆಚ್ಚಿನ ಪ್ರಚಾರ ನಿಡಬೇಕು. ಇತರೆ ಇಲಾಖೆಗಳು ಸಹ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದರು. ಸಭೆಯಲ್ಲಿ ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.