ಕನ್ನಡಪ್ರಭವಾರ್ತೆ ಕುಶಾಲನಗರ
ಮೂರು ದಶಕಗಳ ಹಿಂದೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಉಗ್ರರ ಗುಂಡಿಗೆ ಹುತಾತ್ಮನಾದ ಯೋಧ ರಾಘವೇಂದ್ರ ಅವರ ಹೆಸರಿನಲ್ಲಿ ಹಾರಂಗಿಯಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣಕ್ಕೆ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಡಿಐಜಿ ನೆಲ್ಲೂರ್ ಪೆರುಮಾಳ್ ಮತ್ತು ಕ್ಷೇತ್ರ ಶಾಸಕರಾದ ಡಾ ಡಾ ಮಂತರ್ ಗೌಡ ಚಾಲನೆ ನೀಡಿದರು.ಹಾರಂಗಿಯ ನಿವಾಸಿ ರಾಘವೇಂದ್ರ ಕೆ ಅವರು ಕೇಂದ್ರೀಯ ಕೈಗಾರಿಕಾ ಭದ್ರತಾ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ 1995 ರಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದರು.
ಅವರ ಸ್ಮರಣೆಗಾಗಿ ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಹಾರಂಗಿ ಅಣೆಕಟ್ಟು ಎದುರು ಭಾಗದಲ್ಲಿ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿದ್ದು ರಾಘವೇಂದ್ರ ಕ್ರೀಡಾಂಗಣ ಎಂದು ನಾಮಕರಣ ಮಾಡಲಾಗಿದೆ.ಯೋಧನ ಹೆಸರಿನ ನಾಮಕರಣ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಐಎಸ್ಎಫ್ ಹೈದರಾಬಾದ್ ವಲಯದ ಡಿಐಜಿ ಪೆರುಮಾಳ್ ಅವರು ಮಾತನಾಡಿ ಯೋಧನ ಸ್ಮರಣೆಗಾಗಿ ಕ್ರೀಡಾಂಗಣ ನಿರ್ಮಿಸಲಾಗುತ್ತದೆ. ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಅಗತ್ಯ ಸಹಕಾರ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ಯೋಧನಿಗೆ ಗೌರಾವಾರ್ಪಣೆ ಸಲ್ಲಿಸಿ ಮಾತನಾಡಿದ ಕ್ಷೇತ್ರ ಶಾಸಕರಾದ ಮಂತರ್ ಗೌಡ, ಕೇಂದ್ರ ಗೃಹ ಮಂತ್ರಾಲಯದ ಅಡಿಯಲ್ಲಿ ಬರುವ ಸಿಐಎಸ್ಎಫ್ ಅನುಮತಿ ಮೂಲಕ ಕ್ರೀಡಾಂಗಣ ನಿರ್ಮಾಣವಾಗಲಿದೆ. ಕ್ರೀಡಾಂಗಣಕ್ಕೆ ತಮ್ಮ ಮೂಲಕ 15 ಲಕ್ಷ ರು. ಅನುದಾನ ನೀಡುವುದಾಗಿ ತಿಳಿಸಿದರು.
ದೇಶ ಸೇವೆ ಸಂದರ್ಭ ಪ್ರಾಣಾರ್ಪಣೆ ಮಾಡಿದ ಯೋಧರ ಹೆಸರಿನಲ್ಲಿ ಶಾಶ್ವತವಾಗಿ ಸ್ಮಾರಕಗಳ ಅಗತ್ಯವಿದೆ. ಹಾರಂಗಿಯ ಬಸ್ ತಂಗುದಾಣಕ್ಕೆ ಯೋಧನ ಹೆಸರನ್ನು ನಾಮಕರಣ ಮಾಡುವಂತೆ ಸಲಹೆ ನೀಡಿದರು.
ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಯುವಜನತೆಗೆ ಪ್ರೇರಣೆ ಹಾಗೂ ರಾಷ್ಟ್ರ ಪ್ರೇಮದ ಬಗ್ಗೆ ಅರಿವು ಮೂಡಿಸಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್, ಯೋಧ ಮತ್ತು ಅವರ ಕುಟುಂಬದ ಜೊತೆಗೆ ತಮಗೆ ಇದ್ದ ಬಾಂಧವ್ಯದ ಬಗ್ಗೆ ಮಾಹಿತಿ ಒದಗಿಸಿ ಯೋಧನ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ತಾಯಿ ಕಮಲಮ್ಮ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಸಿ ಐ ಎಸ್ ಎಫ್ ಹಿರಿಯ ಅಧಿಕಾರಿಗಳನ್ನು ಮತ್ತು ಯೋಧನ ತಾಯಿ ಕಮಲಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮಕ್ಕೆ ಮುನ್ನ ಕ್ರೀಡಾಂಗಣದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭ ಸಿಐಎಸ್ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಯೋಗೇಶ್ ಚಂದ್ರ ಮಿಶ್ರ, ಇನ್ಸ್ಪೆಕ್ಟರ್ ಗೌತಮ್, ಸಿ ಐ ಎಸ್ ಎಫ್ ಮೈಸೂರು ಬೆಟಾಲಿಯನ್ ಸಿಬ್ಬಂದಿಗಳು ಪ್ರಮುಖರಾದ ನಟೇಶ್ ಗೌಡ, ಯೋಧನ ಸಹೋದರ ಸುರೇಶ್ ಬಾಬು ಸೇರಿದಂತೆ ಕುಟುಂಬ ಸದಸ್ಯರು, ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಕಿರಣ್, ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಗ್ರಾಮಸ್ಥರು ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.