ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಇಲ್ಲಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 16 ಏತ ನೀರಾವರಿ ಯೋಜನೆಗಳಿದ್ದರೂ ರೈತರ ಯಾತನೆ ಮಾತ್ರ ತಪ್ಪಿಲ್ಲ. ಮಳೆ ಕೈಕೊಟ್ಟಾಗ ರೈತರ ಜಮೀನುಗಳಿಗೆ ನೀರುಣಿಸಬೇಕಿದ್ದ ಯೋಜನೆಗಳಿಂದ ಹನಿ ನೀರು ಕಾಲುವೆಗಳಿಗೆ ಹರಿಯುತ್ತಿಲ್ಲ.

ತುಂಗಭದ್ರಾ ನದಿ ತೀರದಲ್ಲಿ ನಿರ್ಮಾಣಗೊಂಡ ಕೆಲವು ಏತ ನೀರಾವರಿ ಯೋಜನೆಗಳ ಜಾಕ್‌ವೆಲ್‌ಗಳಿಗೆ ನೀರೇ ಇಲ್ಲ. ನದಿ ಹರಿವಿನಲ್ಲೂ ಬಹಳಷ್ಟು ನೀರು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಏತ ನೀರಾವರಿ ಯೋಜನೆಗಳು ಆರಂಭಿಸಿಲ್ಲ.

ತಾಲೂಕಿನ ಹರವಿ-303 ಹೆಕ್ಟೇರ್‌, ಹರವಿ ಬಸಾಪುರ-223 ಹೆಕ್ಟೇರ್‌, ಲಿಂಗನಾಯಕನಹಳ್ಳಿ-81 ಹೆಕ್ಟೇರ್‌, ಕುರುವತ್ತಿ-121 ಹೆಕ್ಟೇರ್‌, ಮೈಲಾರ-(1) 807 ಹೆಕ್ಟೇರ್‌, ಮೈಲಾರ- (2) 607 ಹೆಕ್ಟೇರ್‌, ಚಿಕ್ಕ ಬನ್ನಿಮಟ್ಟಿ-152 ಹೆಕ್ಟೇರ್‌, ನಂದಿಗಾವಿ-141 ಹೆಕ್ಟೇರ್‌, ಬ್ಯಾಲಹುಣ್ಸಿ-152 ಹೆಕ್ಟೇರ್‌, ಮಕರಬ್ಬಿ-222 ಹೆಕ್ಟೇರ್‌, ಕೋಟಿಹಾಳ್‌-56 ಹೆಕ್ಟೇರ್‌, ನವಲಿ-244 ಹೆಕ್ಟೇರ್‌, ಕೊಂಬಳಿ-303 ಹೆಕ್ಟೇರ್‌, ಅಂಕ್ಲಿ-304 ಹೆಕ್ಟೇರ್‌, ಹಕ್ಕಂಡಿ-122 ಹೆಕ್ಟೇರ್‌ ಪ್ರದೇಶ ಅಚ್ಚುಕಟ್ಟು ಹೊಂದಿವೆ. ಆದರೆ ಯೋಜನೆಗಳ ಸಮರ್ಪಕ ನಿರ್ವಹಣೆ ಇಲ್ಲ. ಕಾಟಾಚಾರಕ್ಕೆ ನೀರು ಗಂಟಿಯನ್ನು ನಿಯೋಜಿಸುತ್ತಾರೆ. ರೈತರಿಗೆ ಆಸರೆಯಾಗಬೇಕಾದ ಯೋಜನೆಗಳು ಸಂಪೂರ್ಣ ಹಾಳಾಗಿ ಹೋಗಿವೆ.

ಬಹುತೇಕ ಏತ ನೀರಾವರಿ ಯೋಜನೆಗಳ ಕೆರೆಯಂಗಳ ಸ್ವಚ್ಛತೆಯೇ ಇಲ್ಲ. ಕೆರೆಗೆ ನೀರು ಹರಿಯುವ ಜಾಗದಲ್ಲೇ ದೊಡ್ಡ ಪ್ರಮಾಣದ ಗಿಡ- ಮರಗಳು ಬೆಳೆದು ನಿಂತಿವೆ. ಕಾಲುವೆಗಳು ಸಂಪೂರ್ಣ ಹಾಳಾಗಿವೆ. ಯೋಜನೆಗಳ ನೀರು ಹರಿಸಲು ಅಳವಡಿಸಿದ್ದ ಸಿಮೆಂಟ್‌ ಪೈಪ್‌ಗಳು ಕಿತ್ತು ಹಾಕಿದ್ದಾರೆ. ಕಾಲುವೆಗಳನ್ನು ಸಂಪೂರ್ಣ ಮುಚ್ಚಿ ಹಾಕಿದ್ದಾರೆ. ಒಟ್ಟಾರೆ ನಿರ್ವಹಣೆ ಕೊರತೆ ಕಾಡುತ್ತಿದೆ.


ಏತ ನೀರಾವರಿ ಯೋಜನೆಗಳಿಂದ ಕಾಲುವೆಗಳಿಗೆ ನೀರು ಹರಿಸುವುದು, ಮೋಟರ್‌ ಪಂಪ್‌ಸೆಟ್‌, ಕಾಲುವೆ ದುರಸ್ತಿ, ಕೆರೆಯಂಗಳ ಸ್ವಚ್ಛತೆ, ನಿರ್ವಹಣೆಗಾಗಿ ಟೆಂಡರ್‌ ಮೂಲಕ ಗುತ್ತಿಗೆ ನೀಡಲಾಗುತ್ತಿದೆ. ಆದರೆ ಎಲ್ಲ ಯೋಜನೆಗಳ ಬಿಲ್‌ ಡ್ರಾ ಆಗುತ್ತಿದೆ. ಆದರೆ ಕೆರೆ ಕಾಲುವೆಗಳಿಗೆ ನೀರೇ ಹರಿಯುತ್ತಿಲ್ಲ. ಬಿಲ್‌ಗೆ ಮಾತ್ರ ಸೀಮಿತವಾಗಿದೆ. ಒಬ್ಬ ರೈತನ ಒಂದು ಎಕರೆ ಜಮೀನಿಗೂ ಕೂಡ ನೀರು ಹರಿದಿಲ್ಲ. ಇದರಿಂದ ಬಹಳಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಒಣಗಿ ಹೋಗುತ್ತಿವೆ.

ಏತ ನೀರಾವರಿ ಯೋಜನೆಗಳು ಹೆಸರಿಗೆ ಮಾತ್ರ ಇವೆ. ನದಿ ತುಂಬಿ ಹರಿಯುತ್ತಿದ್ದರೂ ಕೆರೆಗೆ ನೀರು ತುಂಬಿಸಿ, ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರುಣಿಸುತ್ತಿಲ್ಲ ಎನ್ನುತ್ತಾರೆ ಬ್ಯಾಲಹುಣ್ಸಿ ನಿವಾಸಿ ಲಕ್ಷ್ಮಣ ಬಾರ್ಕಿ.

ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಯೋಜನೆಗಳ ಜಾಕ್ವೆಲ್‌ಗಳಿಗೆ ನೀರು ಸಿಗುತ್ತಿಲ್ಲ. ನೀರು ಬಂದ ಕೂಡಲೇ ಕೆರೆಗೆ ತುಂಬಿಸಿ ಕಾಲುವೆಗಳಿಗೆ ಹರಿಸುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಎಇಇ ಮುರಳೀಧರ.