ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಹಿಂದುಳಿದ ತಾಲೂಕು ಹರಪನಹಳ್ಳಿಯಲ್ಲಿ ಜೂನ್‌ ತಿಂಗಳಲ್ಲಿ ಈವರೆಗೆ ಶೇ.68ರಷ್ಟು ಮಳೆ ಕೊರತೆಯಾಗಿದೆ. ಬಿತ್ತನೆ ಕಾರ್ಯ ತೀವ್ರ ಕುಂಠಿತಗೊಂಡಿದೆ.

ಅರಸೀಕೆರೆ- ಶೇ.26ರಷ್ಟು, ಹರಪನಹಳ್ಳಿ- ಶೇ.82, ಚಿಗಟೇರಿ- ಶೇ.88, ತೆಲಿಗಿ- ಶೇ.63 ಹೀಗೆ ತಾಲೂಕಿನಲ್ಲಿ ಜೂನ್‌ ತಿಂಗಳಲ್ಲಿ ಈವರೆಗೆ 55.4 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ ಕೇವಲ 18 ಮಿ.ಮೀ. ಮಳೆ ಬಿದ್ದಿದೆ. ಜನವರಿಯಿಂದ ಈವರೆಗೆ ನೋಡಿದರೆ ಶೇ.35ರಷ್ಟು ಮಳ‍ೆ ಕೊರತೆ ಉಂಟಾಗಿದೆ.

ತೀವ್ರ ತರ ಮಳೆ ಕೊರತೆಯಿಂದ ಮೆಕ್ಕೆಜೋಳ 71131 ಬಿತ್ತನೆ ಗುರಿ ಇದ್ದು, ಅದರಲ್ಲಿ ಕೇವಲ 10,990 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ರಾಗಿ 5800 ಹೆಕ್ಟೇರ್‌ ಗುರಿ ಇದ್ದರೆ 350 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಜೋಳ- 1347 ಹೆಕ್ಟೇರ್‌ ಗುರಿ ಇದ್ದರೆ, 765 ಹೆಕ್ಟೇರ್‌ ಬಿತ್ತನೆ ಆಗಿದೆ. ತೊಗರಿ 2160 ಗುರಿ ಇದ್ದರೆ 198 ಹೆಕ್ಟೇರ್‌ ಬಿತ್ತನೆಯಾಗಿದೆ. ಸೂರ್ಯಕಾಂತಿ -230 ಹೆಕ್ಟೇರ್‌... ಹೀಗೆ ಬಿತ್ತನೆಯಾಗಿದೆ. ಉಳಿದ ಬೆಳೆಗಳ ಬಿತ್ತನೆ ಆಗೇ ಇಲ್ಲ.

ಒಟ್ಟಿನಲ್ಲಿ ತಾಲೂಕಿನಲ್ಲಿ 86,309 ಹೆಕ್ಟೇರ್‌ ಬಿತ್ತನೆ ಗುರಿ ಇದ್ದರೆ ಕೇವಲ 13,289 ಹೆಕ್ಟೇರ್‌ ಬಿತ್ತನೆ ಕಾರ್ಯ ಆಗಿದೆ. ಈಗಾಗಲೇ ಬಿತ್ತಿರುವ ಮೆಕ್ಕೆಜೋಳ ಸೇರಿದಂತೆ ರಾಗಿ ಇತರೆ ಬೆಳೆಗಳು ಮಳೆ ಇಲ್ಲದೇ ಬಾಡುತ್ತಿವೆ. ಕೆಲವು ಕಡೆ ಬೀಜ ಹುಟ್ಟೇ ಇಲ್ಲ.


ರಸಗೊಬ್ಬರ, ಬೀಜಗಳ ದಾಸ್ತಾನು ಇದೆ. ಅರಸೀಕೆರೆ, ಹರಪನಹಳ್ಳಿ ಕಸಬಾ, ಚಿಗಟೇರಿ, ತೆಲಿಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಸಾಸ್ವಿಹಳ್ಳಿ ಮತ್ತು ಹಲುವಾಗಲು ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ಬೀಜ, ಗೊಬ್ಬರ ಮಾರಾಟಕ್ಕೆ ಕೃಷಿ ಇಲಾಖೆಯವರು ಕ್ರಮ ಕೈಗೊಂಡಿದ್ದಾರೆ.

ಈಗಾಗಲೇ ಅಶ್ವಿನಿ, ಭರಣಿ, ಕೃತ್ತಿಕ, ರೋಹಿಣಿ ಮಳೆಗಳು ವಿಫಲವಾಗಿವೆ. ಮೃಗಶಿರ ಪ್ರಗತಿಯಲ್ಲಿದ್ದರೂ ಅಗತ್ಯ ಮಳೆ ಬರುತ್ತಿಲ್ಲ. ಜೂ.22ರಿಂದ ಆರಿದ್ರ ಮಳೆ ಬರುತ್ತದೆ ಎಂದು ಪಂಚಾಂಗ ತಿಳಿಸುತ್ತದೆ. ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ. ಆದರೆ ಮಳೆ ಬೀಳುತ್ತಿಲ್ಲ. ಇದರಿಂದ ಭೂಮಿ ಹದ ಮಾಡಿಕೊಂಡು ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಅಲ್ಪಸ್ವಲ್ಪ ಮಳೆಗೆ ಬಿತ್ತನೆ ಮಾಡಿದ ರೈತರು ಬೀಜ ಹುಟ್ಟದೇ ಇರುವುದು, ಹುಟ್ಟಿದ ಬೆಳೆ ಬಾಡುತ್ತಿರುವುದು ಕಂಡು ಕಂಗಾಲಾಗಿದ್ದಾರೆ. ಬೀಜ ಗೊಬ್ಬರ ಖರೀದಿ ಮಾಡಿದ ಹಣ ಭೂಮಿಯೊಳಗೆ ಹಾಕಿದಂತಾಗಿದೆ.

ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದಾದ ಹರಪನಹಳ್ಳಿ ಒಮ್ಮೆ ಬರ, ಮಗದೊಮ್ಮೆ ಅತಿವೃಷ್ಠಿಗೆ ಸಿಲುಕಿ ಒದ್ದಾಡುತ್ತಿದೆ. ಇನ್ನು ಮುಂದಾದರೂ ಉತ್ತಮ ಮಳೆಯಾದರೆ ರೈತ ಫಸಲನ್ನು ಕಾಣಬಹುದು. ಇಲ್ಲದಿದ್ದರೆ ರೈತರ ಜೀವನ ಕಷ್ಟವಾಗುತ್ತದೆ.

ಮಳೆ ಕೊರತೆಯಿಂದ ಶೇ.10 ಮಾತ್ರ ತಾಲೂಕಿನಲ್ಲಿ ಬಿತ್ತನೆಯಾಗಿದೆ. ಇನ್ನು 4-5 ದಿವಸ ಮ‍ಳೆ ಬಾರದಿದ್ದರೆ ಈಗ ಬಿತ್ತಿದ ಬೀಜ, ಹುಟ್ಟಿದ ಬೆಳೆ ಸಹ ನಾಶವಾಗುತ್ತದೆ. ಬೀಜ, ಗೊಬ್ಬರ ದಾಸ್ತಾನು ಇದೆ. ವಿತರಣೆಗೆ ಕ್ರಮ ಕೈಗೊಂಡಿದ್ದೇವೆ. ವರುಣ ಕೃಪೆ ತೋರಬೇಕಾಗಿದೆ ಎನ್ನುತ್ತಾರೆ ಹರಪನಹಳ್ಳಿ ಸಹಾಯಕ ಕೃಷಿ ನಿರ್ದೇಶಕ ಮುಹಮ್ಮದ್‌ ಆಶ್ರಫ್‌.