ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಕೋ ಲೇಔಟ್ ಹಾಗೂ ಜೆ.ಬಿ.ನಗರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ವಿದ್ಯಾರ್ಥಿ ಸೇರಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗ್ಯಾಂಗ್‌ಮನ್ ಕ್ವಾಟರ್ಸ್ ನಿವಾಸಿ ರಿಯಾನ್ (15) ಮೃತಪಟ್ಟಿರುವ ಘಟನೆ ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶನಿವಾರ ರಾತ್ರಿ 8.30ರ ಸುಮಾರಿಗೆ ರಿಯಾನ್ ಹಳೇ ಮದ್ರಾಸ್ ರಸ್ತೆ ಕಡೆಯಿಂದ ಎಸ್‌ಎಂವಿಟಿ ರೈಲ್ವೆ ಸ್ಟೇಷನ್ ಕಡೆಗೆ ಬೈಕ್‌ನಲ್ಲಿ ಹೋಗುವಾಗ ಎದುರು ದಿಕ್ಕಿನಿಂದ ಬಂದ ಮತ್ತೊಂದು ಸ್ಕೂಟರ್ ಸವಾರ ಡಿಕ್ಕಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಸ್ಕೂಟರ್ ಸವಾರ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆ.ಬಿ ನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಕೂಟರ್‌ಗೆ ಟ್ರ್ಯಾಕ್ಟರ್ ಡಿಕ್ಕಿ: ವಿದ್ಯಾರ್ಥಿ ಸಾವುಮತ್ತೊಂದು ಪ್ರಕರಣದಲ್ಲಿ ಟ್ರ್ಯಾಕ್ಟರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬನ್ನೇರುಘಟ್ಟ ರಸ್ತೆ ಸಾರ್ವಭೌಮ ನಗರದ ನಿವಾಸಿ ಸೂರಜ್ ಕುಮಾರ್ (16) ಮೃತಪಟ್ಟ ವಿದ್ಯಾರ್ಥಿ. 9ನೇ ತರಗತಿ ಓದುತ್ತಿದ್ದ ಬಾಲಕ ಶನಿವಾರ ರಾತ್ರಿ ತನ್ನ ಸಹಪಾಠಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಸ್ಕೂಟರ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ವಿನಾಯಕ ಆಸ್ಪತ್ರೆ ಬಳಿ ಟ್ರ್ಯಾಕ್ಟರ್‌ನ ಟ್ರೇಲರ್ ಸ್ಕೂಟರ್‌ನ ಹ್ಯಾಂಡಲ್‌ಗೆ ತಗುಲಿದ ಪರಿಣಾಮ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಟ್ರ್ಯಾಕ್ಟರ್‌ನ ಬಲಭಾಗದ ಹಿಂಬದಿಯ ಚಕ್ರ ಸೂರಜ್ ಕುಮಾರ್ ತಲೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದೆ.
ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಟ್ರ್ಯಾಕ್ಟರ್ ಚಾಲಕನ ಅತಿವೇಗ, ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂಬುದು ತಿಳಿದು ಬಂದಿದೆ. ಟ್ರ್ಯಾಕ್ಟರ್ ಚಾಲಕನನ್ನು ವಶಕ್ಕೆ ಪಡೆದು ವಾಹನ ಜಪ್ತಿ ಮಾಡಲಾಗಿದೆ. ಅಪ್ರಾಪ್ತ ಸೂರಜ್ ಕುಮಾರ್‌ಗೆ ಬೈಕ್ ನೀಡಿರುವ ವಾಹನ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.