ಕನ್ನಡಪ್ರಭ ವಾರ್ತೆ ಬೆಳಗಾವಿ

ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷರಾಗಲಿ ಮತ್ತು ಸಚಿವ ಸ್ಥಾನ ಸಿಗಲಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನ ಕಾಯಿಗಳನ್ನು ಒಡೆದು ಕಾಂಗ್ರೆಸ್‌ ಕಾರ್ಯಕರ್ತರು ಪ್ರಾರ್ಥಿಸಿದರು.

ಇಲ್ಲಿನ ಚನ್ನಮ್ಮ ವೃತ್ತದ ಬಳಿ ಇರುವ ಗಣಪತಿ ದೇಗುಲದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ಅನೇಕ ಕಾರ್ಯಕರ್ತರು ಸೇರಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಬಾರಿ ಸಚಿವರಾಗಿ ಸತೀಶ್‌ ಜಾರಕಿಹೊಳಿ ಅವರು ರಾಜ್ಯದ ಪ್ರಗತಿಗೆ ಹೊಸ ದಿಕ್ಕು ನೀಡಿದ್ದಾರೆ. ಅವರ ಸುದೀರ್ಘ ರಾಜಕೀಯ ಸೇವೆ, ಪಕ್ಷದ ಮೇಲಿರುವ ನಿಷ್ಠೆ ಮತ್ತು ಅವರ ಹಿರಿತನವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ಮುಂಬರುವ ದಿನಗಳಲ್ಲಿ ಅವರಿಗೆ ಕೆಪಿಸಿಸಿ ಸಾರಥ್ಯವನ್ನು ನೀಡಬೇಕು ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಸತೀಶ ಜಾರಕಿಹೊಳಿ ಅವರ ಸೇವೆ, ಪಕ್ಷ ನಿಷ್ಠೆ ಮತ್ತು ಹಿರಿತನವನ್ನು ಪರಿಗಣಿಸಿ ಅವರನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.


ಸಿದ್ದರಾಮಯ್ಯನವರು ಮೂರು ವರ್ಷಗಳ ಕಾಲ ಸ್ವಚ್ಛ ಆಡಳಿತ ನೀಡಿ, ಹಲವಾರು ಯೋಜನೆಗಳನ್ನು ಜಾರಿ ಮಾಡಿದ ಏಕೈಕ ದೀಮಂತ ನಾಯಕರು. ಅವರ ಆಡಳಿತ ಅವಧಿಯಲ್ಲಿ ಯಾವುದೇ ಸಮಸ್ಯೆಯಾಗದಂತೆ ರಾಜ್ಯದ ಪ್ರಗತಿಗೆ ಶ್ರಮಿಸಿದವರು. ಅವರ ಆಡಳಿತ ವೈಖರಿಗೆ ರಾಜ್ಯದ ಅಪಾರ ಮೆಚ್ಚುಗೆ ನೀಡಿದ್ದಾರೆ. ರಾಜ್ಯ ಕಂಡ ಅಪರೂಪ ನಾಯಕರು ಸಿದ್ದರಾಮಯ್ಯನವರು, ಮುಂದಿನ ಮುಖ್ಯಮಂತ್ರಿ ಆಗುತ್ತಿರುವ ಡಿ.ಕೆ.ಶಿವಕುಮಾರ ಕೂಡ ಸರಳತೆಯ ನಾಯಕರು, ಅವರ ನೇತೃತ್ವದಲ್ಲಿ ಎರಡು ವರ್ಷಗಳ ಕಾಲ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸಲಿದೆ. ಸಿದ್ದರಾಮಯ್ಯನವರ ಹಾದಿಯಲ್ಲಿ ಡಿ.ಕೆ.ಶಿವಕುಮಾರ ಅವರು ಸಾಗಲಿದ್ದಾರೆ. ಜೊತೆಗೆ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಪಕ್ಷದ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದು, ಸತೀಶ್ ಜಾರಕಿಹೊಳಿ ಪರವಾಗಿ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಇತರರು ಇದ್ದರು.