ಕನ್ನಡಪ್ರಭ ವಾರ್ತೆ ರಾಮದುರ್ಗ

ಕೃಷಿ ಲಾಭದಾಯಕವಾಗಲು ಅಧುನಿಕ ತಂತ್ರಜ್ಞಾನ ರೈತರಿಗೆ ತಲುಪುವಂತಾಗಲು ಕೃಷಿ ಪದವೀಧರರು ಸತತ ಪ್ರಯತ್ನದ ಮೂಲಕ ಶ್ರಮಿಸುವ ಅಗತ್ಯವಿದೆ. ರೈತರು ಕೂಡ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ತೊಂಡಿಕಟ್ಟಿಯ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು ಹೇಳಿದರು.ಗೊಡಚಿಯಲ್ಲಿ ಶನಿವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ. ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿಯ ತೋಟಗಾರಿಕೆ ವಿದ್ಯಾರ್ಥಿಗಳ- 2025- 2026 ನೇ ಸಾಲಿನ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರದ ಸಮಾರೋಪ ಹಾಗೂ ತೋಟಗಾರಿಕಾ ವಸ್ತು ಪ್ರದರ್ಶನ (ನೇಗಿಲ ನೆರಳು) ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು. ಕೃಷಿ ಪದವಿ ಪಡೆದ ನೂತನ ವಿಜ್ಞಾನಿಗಳು ಪದವಿ ಸದುಪಯೋಗವಾಗಲು ಸರ್ಕಾರಿ ನೌಕರಿ ಅವಲಂಬಿಸದೆ ಕೃಷಿಯಲ್ಲಿ ಸಂಶೋಧನೆ ಮಾಡುವ ಮುಖಾಂತರ ರೈತರಿಗೆ ನೆರವಾಗಬೇಕು. ಉತ್ತಮ ಸಂಸ್ಕಾರ ಪಡೆದು ಉತ್ತಮ ಪ್ರಜೆಯಾಗಬೇಕು. ರೈತರು ಭೂಮಿಗೆ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರ ಬಳಕೆ ಮಾಡುವ ಮೂಲಕ ಭೂಮಿಗೆ ವಿಷ ನೀಡುವದನ್ನು ಬಿಡಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ತೋಟಗಾರಿಕಾ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ತಮ್ಮಯ್ಯ.ಎನ್ ಮಾತನಾಡಿ, ಕೃಷಿ ಪದವೀಧರರು ಅಧುನಿಕ ಸಂಶೋಧನೆ ಕೈಗೊಂಡು ದೇಶ ಮೆಚ್ಚುವ ಕೃಷಿ ವಿಜ್ಞಾನಿಗಳಾಬೇಕಂದು ಆಶಯ ವ್ಯಕ್ತಪಡಿಸಿದರು.ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಆನಂದ ಮಾಸ್ತಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಶ್ರೀನಾಥ್ ಚಿಮ್ಮಲಗಿ, ಪ್ರಕಾಶ್ ಮುಗಳಕೋಡ ಮತ್ತು ಮಂಜುನಾಥ್ ದೇವರಡ್ಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತೋಟಗಾರಿಕೆ ವಸ್ತು ಪ್ರದರ್ಶನ, ನೂತನ ಕೃಷಿ ತಂತ್ರಜ್ಞಾನಗಳ ಪರಿಚಯ, ಸಮಗ್ರ ಕೀಟ ಹಾಗೂ ರೋಗ ನಿರ್ವಹಣಾ ಕ್ರಮಗಳು ಕುರಿತು ಪ್ರದರ್ಶನ ನೀಡಲಾಯಿತು. ಶಂಕರಗೌಡ ಮತ್ತು ಸುನಿತಾ ನಿರೂಪಿಸಿದರು, ಜ್ಯೋತಿ ಸ್ವಾಗತಿಸಿದರು ಹಾಗೂ ಇಮ್ರಾನ್ ವಂದಿಸಿದರು.