ಕನ್ನಡಪ್ರಭ ವಾರ್ತೆ ರಾಮದುರ್ಗ
ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯ ಜನನಿಬಿಡ ಪ್ರದೇಶ, ಸಂತೆ, ಜಾತ್ರೆ ನಡೆಯುವ ಗ್ರಾಮಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದ 8 ಜನ ಆರೋಪಿಗಳನ್ನು ಕಟಕೋಳ ಪೊಲೀಸರು ಬಂಧಿಸಿದ್ದಾರೆ. ಒಟ್ಟು 8 ಜನರನ್ನು ಬಂಧಿಸಿ ಅವರಿಂದ ₹ 10.34 ಲಕ್ಷ ಮೌಲ್ಯದ 40 ಮೊಬೈಲ್ ಮತ್ತು ಎರಡು ಕಾರುಗಳನ್ನು ವಶ ಪಡಿಸಿಕೊಂಡಿದ್ದಾರೆ.ಈ ಪ್ರಕರಣದಲ್ಲಿ ಭಾಗಿಯಾದ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ವಿಕಾಸ ವೆಂಕಟೇಶ ಭೋವಿ, ಕುಮಾರ ಪಾಪಣ್ಣ ಭೋವಿ, ಪ್ರವೀಣ ಮಂಜಪ್ಪ ಭೋವಿ, ಸಂತೋಷ ಗವಿಸ್ವಾಮಿ ಕುಂಡಾ, ಶಿವು ಯಲ್ಲಪ್ಪ ಭೋವಿ, ವೆಂಕಟೇಶ ಈರಪ್ಪ ಭೋವಿ, ಅಕ್ಷಯ ಗಣೇಶ ಎ.ಜಿ, ಮತ್ತು ಹುಬ್ಬಳ್ಳಿಯ ಸಚಿನ ಲಕ್ಷ್ಮಣ ಕಲ್ಲವಡ್ಡರ ಅವರನ್ನು ಬಂಧಿಸಿದ್ದಾರೆ.
ಒಟ್ಟು ₹ 4.94 ಮೌಲ್ಯದ ವಿವಿಧ ಕಂಪನಿಗಳ 40 ಮೊಬೈಲ್ ಪೋನ್‌ಗಳು ಹಾಗೂ ₹ 5.40 ಮೌಲ್ಯದ ಎರಡು ಕಾರುಗಳನ್ನು ಆರೋಪಿತರಿಂದ ಕಟಕೋಳ ಪೋಲೀಸರು ವಶಪಡಿಸಿಕೊಂಡಿದ್ದಾರೆ.ಖಚಿತ ಮಾಹಿತಿ ಆಧರಿಸಿ ಪೊಲೀಸರು ವಿಶೇಷ ತಂಡ ರಚಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು.
ಈ ವೇಳೆ ಡಿಎಸ್ಪಿ ಚಿದಂಬರ ಮಡಿವಾಳರ, ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ಕಟಕೋಳ ಪಿಎಸ್‌ಐ ಬಸವರಾಜ ಕೊಣ್ಣೂರೆ, ಪ್ರೊಬೆಷನರಿ ಪಿಎಸ್‌ಐ ಅನ್ನಪರ‍್ಣ, ಅಪರಾಧ ವಿಭಾಗದ ಸಿಬ್ಬಂದಿ ಬಿ.ವಿ.ಹುಲಕುಂದ, ಎಸ್.ಎಸ್.ವಜ್ರಮಟ್ಟಿ, ಎಂ.ಸಿ.ಮನ್ನಿಕೇರಿ, ಎಸ್.ಎಂ.ಬಸರಿಕಟ್ಟಿ, ಆರ್.ಬಿ.ಗೋಕಾಕ, ಡಿ.ಎಚ್. ನಧಾಪ್, ಬಿ.ಎಸ್. ಚುಂಚನೂರ, ಬಿ.ಎಚ್.ಪಾಟೀಲ, ಎಂ.ಎಂ.ದ್ಯಾಮನಗೌಡರ, ಎಂ.ಜಿ. ಹಿರೂರ. ಜೆ.ಆರ್.ಗಿಡ್ಡಪ್ಪನವರ ತಂಡದಲ್ಲಿದ್ದರು.