ಮೇಲುಕೋಟೆ:
ಪ್ರಖ್ಯಾತ ಯೋಗಾನರಸಿಂಹಸ್ವಾಮಿ ಬೆಟ್ಟದ ದೇವಾಲಯದ ಹುಂಡಿಯಲ್ಲಿ ಎರಡೇ ತಿಂಗಳಲ್ಲಿ ಕಳೆದೆಲ್ಲ ಸಾಲಿಗಿಂತ ಹೆಚ್ಚಿನ ಪ್ರಮಾಣದ ಕಾಣಿಕೆ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ.ಮಂಗಳವಾರ ಅಮಾವಾಸ್ಯೆಯಂದು ನಡೆದ ಹುಂಡಿ ಎಣಿಕೆಯಲ್ಲಿ 17,38,281 ರು. ಕಾಣಿಕೆ ಸಂಗ್ರಹವಾಗಿದೆ. 2026ರ ಮಾರ್ಚ್ ವೇಳೆ ನಡೆದ ವೈರಮುಡಿ ಜಾತ್ರಾ ಮಹೋತ್ಸವದ ಮೂರು ತಿಂಗಳ ಅವಧಿಯಲ್ಲಿ 11 ಲಕ್ಷ ರು. ಹುಂಡಿಹಣ ಸಂಗ್ರಹವಾಗಿತ್ತು. ಅಚ್ಚರಿಯೆಂದರೆ ಅದಕ್ಕೂ ಹಿಂದಿನ 4 ತಿಂಗಳ ಅವಧಿಯ ಹುಂಡಿ ಎಣಿಕೆ ವೇಳೆ ಕೇವಲ 6 ಲಕ್ಷ ರು. ಮಾತ್ರ ಕಾಣಿಕೆ ಸಂಗ್ರಹವಾಗಿದೆ. ಆದರೆ, ವೈರಮುಡಿ ಜಾತ್ರೆ ನಂತರ ಕೇವಲ ಎರಡು ತಿಂಗಳು 10 ದಿನಗಳ ಅವಧಿಯಲ್ಲಿ 17 ಲಕ್ಷಕ್ಕೂ ಹೆಚ್ಚು ಕಾಣಿಕೆ ಸಂಗ್ರಹವಾಗಿ ಅಚ್ಚರಿ ಮೂಡಿಸಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರ್ನಾಟಕದ ದೇವಾಲಯಗಳಲ್ಲಿ ಹುಂಡಿಯಲ್ಲಿನ ಕಾಣಿಕೆಯನ್ನು ಪಾರದರ್ಶಕ ವ್ಯವಸ್ಥೆಯಡಿ ಎಣಿಕೆ ಕಾರ್ಯ ಮಾಡುವಂತೆ ಸೂಚಿಸಿದ ಬೆನ್ನಲ್ಲೇ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್‌ಗೌಡ ಹಾಗೂ ಸಮಿತಿಯ ಸದಸ್ಯರ ಖುದ್ದು ಹಾಜರಿಯಲ್ಲಿ ಯೋಗನರಸಿಂಹಸ್ವಾಮಿ ಬೆಟ್ಟದ ದೇವಾಲಯದ ಹುಂಡಿಕಾಣಿಕೆ ಕಾರ್ಯ ಇಡೀ ದಿನ ನಡೆದಿದೆ.ಈ ಬಗ್ಗೆ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್‌ಗೌಡ, ಹುಂಡಿ ಕಾಣಿಕೆಯ ವ್ಯತ್ಯಾಸ ಬೆಳಕಿಗೆ ಬಂದಿದ್ದು, ವ್ಯವಸ್ಥಾಪನಾ ಸಮಿತಿಯಿಂದ ಭಕ್ತರ ಕಾಣಿಕೆ ರಕ್ಷಣೆಯ ಪರಗಿ ನಿಂತು ಕಟ್ಟುನಿಟ್ಟಾದ ಕ್ರಮ ಜರುಗಿಸಿದ್ದೇವೆ. ಹಿಂದೆ ನಡೆದಿದ್ದ ಅಹಿತಕರ ಪ್ರಕರಣದ ವಿಚಾರದಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಧಾರ್ಮಿಕದತ್ತಿ ಕಾಯ್ದೆಯನಿಯಮಡಿ ಕಾನೂನು ರೀತಿಯ ಕ್ರಮ ಅನುಸರಿಸಿದ್ದೇವೆ ಎಂದರು.
ದೇವಾಲಯದ ಸಿಸಿ ಕ್ಯಾಮೆರಾ ಕಳುವಿನ ಪ್ರಕರಣದ ನಂತರ ಪೊಲೀಸ್ ದೂರು ದಾಖಲಾಗಿ ಆರು ಮಂದಿ ನೌಕರರನ್ನು ಅಮಾನತು ಮಾಡಿದ ತರುವಾಯ ಮೊದಲ ಬಾರಿಗೆ ನಡೆದ ಹುಂಡಿಯ ಎಣಿಕೆ ವೇಳೆ ಕಾಣಿಕೆ ಹೆಚ್ಚಾಗಿ ಸಂಗ್ರಹವಾಗಿರುವುದು ಕಂಡುಬಂದಿದೆ.