ಕಿಕ್ಕೇರಿ

ಎಳೆಯ ಮನಸ್ಸುಗಳಲ್ಲಿ ಮೊಬೈಲ್ ಬಿಡಿಸಿ ಪುಸ್ತಕ ಓದುವ ಅಭಿರುಚಿ ಮೂಡಿಸಿದರೆ ಸುಂದರ ಭವಿಷ್ಯ ಮಕ್ಕಳದಾಗಲಿದೆ ಎಂದು ಚಲನಚಿತ್ರ ನಟ ಮಧು ಮಂದಗೆರೆ ಹೇಳಿದರು.

ಸಮೀಪದ ಮಂದಗೆರೆ ಗ್ರಾಮದ ಹೇಮಾವತಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಮೊಬೈಲ್ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕುಡಿತಕ್ಕಿಂತ ಅಪಾಯವಾಗಿ ಮೊಬೈಲ್‌ ಇದೆ. ಮೊಬೈಲ್‌ ಗೀಳಿಗೆ ಮಕ್ಕಳು ಸಿಲುಕುವ ಮುನ್ನ ಎಚ್ಚರಿಕೆ ವಹಿಸಿ ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯುವ ಪರಿಪಾಠ ರೂಪಿಸಿಕೊಳ್ಳಬೇಕಿದೆ ಎಂದರು.ಒಳಿತು, ಕೆಡುಕು ವಿಮರ್ಶೆ ಮಾಡುವ ಜ್ಞಾನ ಮಕ್ಕಳಲ್ಲಿ ಇರಲಾರದು. ಇದು ತತ್ಕಾಲದಲ್ಲಿ ಮನೋರಂಜನೆ ನೀಡಿ ಭವಿಷ್ಯ, ಆರೋಗ್ಯ ಎಲ್ಲವನ್ನು ಕಸಿಯಲಿದೆ. ಮೊಬೈಲ್ ವೀಕ್ಷಣೆ ವೇಳೆ ಡೊಪಮಿನ್‌ ರಾಸಾಯನಿಕ ವಸ್ತು ಮೆದುಳಿನಲ್ಲಿ ಬಿಡಗಡೆಯಾಗುವುದರಿಂದ ಆರೋಗ್ಯ, ಜ್ಞಾಪಕ ಶಕ್ತಿಗೆ ಮಾರಕವಾಗಿ ನಿದ್ರಾಹೀನತೆಗೆ ದೂಡಲಿದೆ ಎಚ್ಚರಿಸಿದರು.

ಯುವಶಕ್ತಿಗಳು ಮಾದಕ ವಸ್ತುಗಳ ವ್ಯಸನಿಯಾಗುತ್ತಿದ್ದು, ಪೋಷಕರು ಮಕ್ಕಳನ್ನು ಜಾಗರೂಕವಾಗಿ ವೀಕ್ಷಣೆ ಮಾಡಿ ತಿಳಿ ಹೇಳುವ ಕೆಲಸ ಮಾಡಬೇಕಿದೆ. ಬಡ, ರೈತಾಪಿ ವರ್ಗದ ಮಕ್ಕಳಿಗೆ ಇರುವ ಸರ್ಕಾರಿ ಶಾಲೆ ಮುಚ್ಚದಂತೆ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಮುಂದಾಗಿ ಎಂದು ವಿನಂತಿಸಿದರು.

ಮುಖ್ಯಶಿಕ್ಷಕ ಶೇಖರ್ ಮಾತನಾಡಿದರು. ಶಿಕ್ಷಕರಾದ ಚೇತನ್, ಭುವನೇಶ್ವರಿ, ಪಲ್ಲವಿ, ಎಸ್‌ಡಿಎಂಸಿ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ಇದ್ದರು.