ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಮಾದಕ ವಸ್ತು ಸೇವನೆ ಚಟವಾಗಿಸಿಕೊಂಡು ದುರಂತ ಅಂತ್ಯ ಕಾಣುತ್ತಿರುವುದನ್ನು ಪ್ರತಿನಿತ್ಯ ನೋಡುತ್ತಿದ್ದೇವೆ. ಸಮಾಜಕ್ಕೆ ಮಾರಕವಾದ ಮಾದಕ ದ್ರವ್ಯ, ತಂಬಾಕು ಉತ್ಪನ್ನ ಹಾಗೂ ಧೂಮಪಾನ ಸೇವನೆಯಂತಹ ದುಶ್ಚಟಗಳಿಂದ ದೂರವಿರಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಾದಕ ವಸ್ತುಗಳ ಬಳಕೆ, ಸಂಗ್ರಹಣೆ, ಸಾಗಾಟ ಮತ್ತು ಮಾರಾಟ ಎಲ್ಲವೂ ಕಾನೂನಿಗೆ ವಿರುದ್ಧವಾಗಿದೆ. ಮಾದಕ ದ್ರವ್ಯ ಸೇವಿಸುವವನ ಜೀವನ ಹಾಳು ಮಾಡುವುದಲ್ಲದೆ ನೆರೆಹೊರೆಯ ಸಮಾಜವನ್ನು ಸಹ ಹಾಳು ಮಾಡುತ್ತದೆ ಎಂದು ಪೊಲೀಸ್ ಠಾಣೆ ಪಿಎಸ್‌ಐ ಮಾರುತಿ ಹೇಳಿದರು.

ತಾಲೂಕಿನ ಬಿಂಡಿಗನವಿಲೆಯಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಪ್ರಯುಕ್ತ ಆಯೋಜಿಸಿದ್ದ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ದುಶ್ಚಟಗಳಿಗೆ ಬಲಿಯಾಗುವ ವ್ಯಕ್ತಿಗಳಿಂದ ಅವರ ಕುಟುಂಬದಲ್ಲಿಯೂ ನೆಮ್ಮದಿ ಇಲ್ಲದಂತಾಗುತ್ತದೆ. ಯುವ ಸಮೂಹ ಕ್ಷಣಿಕ ಸುಖ ಆಡಂಬರಕ್ಕಾಗಿ ಮಾದಕ ದ್ರವ್ಯ ಸೇವನೆ ಸೇರಿದಂತೆ ಹಲವು ವ್ಯಸನಗಳಿಗೆ ದಾಸರಾಗಿ ತಮ್ಮ ಜೀವನ ಹಾಳುಮಾಡಿಕೊಳ್ಳಬಾರದು ಎಂದರು.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಮಾದಕ ವಸ್ತು ಸೇವನೆ ಚಟವಾಗಿಸಿಕೊಂಡು ದುರಂತ ಅಂತ್ಯ ಕಾಣುತ್ತಿರುವುದನ್ನು ಪ್ರತಿನಿತ್ಯ ನೋಡುತ್ತಿದ್ದೇವೆ. ಸಮಾಜಕ್ಕೆ ಮಾರಕವಾದ ಮಾದಕ ದ್ರವ್ಯ, ತಂಬಾಕು ಉತ್ಪನ್ನ ಹಾಗೂ ಧೂಮಪಾನ ಸೇವನೆಯಂತಹ ದುಶ್ಚಟಗಳಿಂದ ದೂರವಿರಬೇಕು. ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಲ್ಲಿಯೇ ಇದರ ವಿರುದ್ಧ ಹೋರಾಡುವ ಮೂಲಕ ಸ್ವಾಸ್ತ್ಯ ಸಮಾಜವನ್ನು ನಿರ್ಮಿಸಲು ಸಹಕರಿಸಬೇಕು ಎಂದರು.

ಎಲ್ಲಾ ಬಗೆಯ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ತಪ್ಪಿಸಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿಯೇ ಬೈಕ್ ಚಾಲನೆ ಮಾಡಬೇಕು ಎಂದರು.

ನಂತರ ಬಿಂಡಿಗನವಿಲೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಂಬಾಕು ತ್ಯಜಿಸಿ ಜೀವ ಉಳಿಸಿ, ಮಾದಕ ದ್ರವ್ಯ ಸೇವನೆ ಆರೋಗ್ಯಕ್ಕೆ ಹಾನಿಕರ, ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ ಎಂಬ ಘೋಷಣೆಗಳೊಂದಿಗೆ ಜನಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಬಳಿಕ ಠಾಣೆ ವ್ಯಾಪ್ತಿಯ ಮಾದಿಹಳ್ಳಿ ಹಾಗೂ ಮಾಯಿಗೋನಹಳ್ಳಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮ ಹಾಗೂ ಸಂಚಾರ ನಿಯಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು. ಠಾಣೆಯ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.