ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಸಿಸಿಬಿ ಪೊಲೀಸರು ಶನಿವಾರ ಭರ್ಜರಿ ಬೇಟೆಯಾಡಿದ್ದು, ಸೂಕ್ತ ದಾಖಲೆಯಿಲ್ಲದೆ ಸರಕು ಸಾಗಣೆ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹2.73 ಕೋಟಿ ನಗದನ್ನು ಜಪ್ತಿ ಮಾಡಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಮಹಾರಾಷ್ಟ್ರದ ಸಾಂಗಲಿ ನಿವಾಸಿಗಳಾದ ಸಚೀನ ಮೇನಕುದುಳೆ, ಮಾರುತಿ ಮಾರಗುಡೆ ಬಂಧಿತ ಆರೋಪಿಗಳು. ಮಹಾರಾಷ್ಟ್ರದ ಸಾಂಗಲಿಯಿಂದ ಹುಬ್ಬಳ್ಳಿ ಕಡೆಗೆ ಗೂಡ್ಸ್ ವಾಹನದಲ್ಲಿ ಹಣ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಬೆಳಗಾವಿ ಸಿಸಿಬಿ ಪೊಲೀಸರು ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡುಬಿಟ್ಟು ವಾಹನ ತಡೆದು ತಪಾಸಣೆ ಮಾಡಿದ್ದು, ಈ ವೇಳೆ ಗೂಡ್ಸ್ ವಾಹನದೊಳಗೆ ಕ್ಯಾಬಿನ್ ರೀತಿ ಮಾರ್ಪಾಡು ಮಾಡಿರುವುದು ಸಂಶಯ ಬಂದು ತೆರೆದು ನೋಡಿದಾಗ ಅದರೊಳಗೆ ₹500 ಮುಖಬೆಲೆಯ ಕಂತೆ ಕಂತೆ ನೋಟುಗಳಿರುವುದು ಪತ್ತೆಯಾಗಿದೆ. ತಕ್ಷಣ ಹಣ ಜಪ್ತಿ ಮಾಡಿಕೊಂಡಿದ್ದಾರೆ. ವಾಹನ ವಶಕ್ಕೆ ಪಡೆದು ಚಾಲಕ ಹಾಗೂ ಜೊತೆಗಿದ್ದ ಮ್ತೊಬ್ಬನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆ ಆಗಿದ್ದು, ಗಡಿಭಾಗದಲ್ಲಿ ಹಣ ಸಾಗಣೆ ಮೇಲೆ ತೀವ್ರ ನಿಗಾ ವಹಿಸಿರುವ ಮಧ್ಯೆಯೇ ಗೂಡ್ಸ್ ವಾಹನದಲ್ಲಿ ಇಷ್ಟೊಂದು ಪ್ರಮಾಣದ ಸಾಗಣೆ ಮಾಡುತ್ತಿರುವುದು ಪೊಲೀಸರಿಗೆ ಅಚ್ಚರಿ ಮೂಡಿಸಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.