ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ತಾಲೂಕು ಹೇರೂರು ಗ್ರಾಮದ ಸುವರ್ಣಮುಖಿ ನದಿಯ ದಡದಲ್ಲಿ ಹೊಯ್ಸಳರ ಕಾಲದ ೨ ವೀರಗಲ್ಲುಗಳು ಪತ್ತೆಯಾಗಿವೆ.ಮಂಡ್ಯ ವಿಶ್ವವಿದ್ಯಾಲಯದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಮುಖ್ಯಸ್ಥರು ಹಾಗೂ ಪ್ರಾಚಾರ್ಯರಾದ ಡಾ.ಗುರುರಾಜ್ ಪ್ರಭು ಕೆ ಇವರ ಮಾರ್ಗದರ್ಶನದಲ್ಲಿ ಸಂಶೋಧನಾ ವಿದ್ಯಾರ್ಥಿ ಮಹಾಲಿಂಗೇಗೌಡ ಜಿ ಇವರು ಸಂಶೋಧನಾ ಕ್ಷೇತ್ರ ಕಾರ್ಯ ಕೈಗೊಂಡಾಗ ಹೇರೂರು ಗ್ರಾಮದ ಸಮೀಪದಲ್ಲಿ ಹರಿಯುವ ಸುವರ್ಣಮುಖಿ ನದಿಯ ದಂಡೆಯಲ್ಲಿ ಮಣ್ಣಿನಲ್ಲಿ ಮುಚ್ಚಿಹೋಗಿದ್ದ ೨ ವೀರಗಲ್ಲುಗಳನ್ನು ಸುಧಾಕರ್, ಈರಣ್ಣ ಮಾಸ್ಟರ್, ಗುಮ್ಮನಹಳ್ಳಿ ಶಿವಕುಮಾರ್ ಇವರ ಸಹಕಾರದೊಂದಿಗೆ ಉತ್ಖನನ ಮೂಲಕ ಮೇಲಕ್ಕೆ ಎತ್ತಿ ಮಿಥಿಕ್ ಸೊಸೈಟಿಯ ಶಶಿಕುಮಾರ್ ನಾಯ್ಕ್ ಇವರಿಂದ ಅವುಗಳನ್ನು ಓದಿಸಲಾಯಿತು. ೨ ವೀರಗಲ್ಲುಗಳಲ್ಲಿ ಹೇರೂರು ಗ್ರಾಮದ ಉಲ್ಲೇಖವಿದೆ ಸುಮಾರು ೮೦೦ ವರ್ಷಗಳ ಹಿಂದೆ ಈ ಗ್ರಾಮ ಅಸ್ತಿತ್ವದಲ್ಲಿತ್ತು. ಈ ಗ್ರಾಮ ಹೊಯ್ಸಳರ ೩ನೇ ವೀರನರಸಿಂಹನ ಕಾಲದಲ್ಲಿ ಹೇರೂರು ಚಂದಯ ಹೆಗ್ಗಡೆಯ ಮಗ ಕೇತಮಲ್ಲ ಹೆಗ್ಗಡೆಯು ನರಸಿಂಗದೆವನೊಡನೆ ಹೋರಾಡಿ ವೀರಮರಣ ಹೊಂದಿದ ಮಾಹಿತಿ ನೀಡುತ್ತದೆ. ಮತ್ತೊಂದರಲ್ಲಿ ವೀರನೊಬ್ಬ ಹೋರಾಡಿದ ಬಗ್ಗೆ ಉಲ್ಲೇಖವಿದೆ ಅದರಲ್ಲಿ ರಾಜ ಮತ್ತು ವೀರನ ಹೆಸರಿನ ಉಲ್ಲೇಖವು ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಹೇರೂರು ಎಂಬ ಉಲ್ಲೇಖವಿರುವ ಪ್ರಮುಖ ವೀರಗಲ್ಲು ಶಾಸನಗಳಾಗಿವೆ ಎಂದು ಮಹಾಲಿಂಗೇಗೌಡ ತಿಳಿಸಿದ್ದಾರೆ.