ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ನಗರವು ರಾಜ್ಯದ ಪ್ರಮುಖ ಕೈಗಾರಿಕಾ ಹಾಗೂ ಶಿಕ್ಷಣ ಕೇಂದ್ರವಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ನೆಲಮಂಗಲದಿಂದ ತುಮಕೂರು ಬೈಪಾಸ್ ರಸ್ತೆವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ-48 ಕಾಮಗಾರಿಯನ್ನು 2026 ರ ಮಾರ್ಚ್ ಮಾಹೆಯೊಳಗೆ ಪೂರ್ಣಗೊಳಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಅನೂಪ್ ಶರ್ಮಾ ಅವರಿಗೆ ಸೂಚನೆ ನೀಡಿದರು.ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನೆಲಮಂಗಲ–ತುಮಕೂರು ಮಾರ್ಗದ ರಾ.ಹೆ.-48ರಲ್ಲಿ 45 ಕಿಲೋ ಮೀಟರ್ ಉದ್ದದ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಸುಮಾರು 19 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯು 16 ಹಳ್ಳಿಗಳ ಮೂಲಕ ಹಾದು ಹೋಗಲಿದೆ. ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕಾಮಗಾರಿಯನ್ನು ಕೈಗೊಳ್ಳಬೇಕು. ನಗರದ ಬೆಳಗುಂಬ, ಶ್ರೀದೇವಿ ಕಾಲೇಜು, ಯಲ್ಲಾಪುರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿರುವ ರಸ್ತೆ ಕೆಳ ಸೇತುವೆಗಳಲ್ಲಿ ಬೆಳಕಿನ ವ್ಯವಸ್ಥೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಪಘಾತಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 40 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದ್ದು, ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ಬೆಳಕಿನ ವ್ಯವಸ್ಥೆ, ಎಚ್ಚರಿಕೆ ಫಲಕಗಳು, ಪೇಂಟಿಂಗ್ ಹಾಗೂ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಅಪಘಾತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ತುಮುಲ್ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಎಚ್.ವಿ ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಮಹಾನಗರ ಪಾಲಿಕೆ ಆಯುಕ್ತ ಆಶ್ವಿಜ, ರಾಷ್ಟ್ರೀಯ ಹೆದ್ದಾರಿ-48 ವಿಶೇಷ ಭೂಸ್ವಾಧಿನಾಧಿಕಾರಿ ಅಪೇಕ್ಷ ಸತೀಶ್ ಪವಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.