ಕೋಲಾರ:

ಸಾರ್ವಜನಿಕರಿಂದ ಬಂದ ದೂರನ್ನಾಧರಿಸಿ ಆಹಾರ ಸುರಕ್ಷತೆ ಹಾಗೂ ಪೊಲೀಸ್ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೆಜಿಎಫ್ ತಾಲೂಕಿನ ಗೋಪಿಯನಹಳ್ಳಿಯಲ್ಲಿ ಸುಮಾರು ೨೦೦ ಲೀಟರ್ ಕಲಬೆರಕೆ ಹಾಲನ್ನು ಜಪ್ತಿ ಮಾಡಿ ಸ್ಥಳದಲ್ಲೇ ನಾಶಪಡಿಸಿದ ಘಟನೆ ನಡೆದಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟ ನಿರ್ದೇಶನ ಹಾಗೂ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿ ಡಾ.ರಾಕೇಶ್‌ರ ಮಾರ್ಗದರ್ಶನದಲ್ಲಿ ಈ ದಿಢೀರ್ ದಾಳಿ ಕೈಗೊಳ್ಳಲಾಗಿತ್ತು.

ಘಟನೆ ವಿವರ:

ಗೋಪಿಯನಹಳ್ಳಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ, ಒಟ್ಟು ೫ ಹಾಲು ಕ್ಯಾನ್‌ಗಳಲ್ಲಿದ್ದ ೨೦೦ ಲೀಟರ್ ಕಲಬೆರಕೆ ಹಾಲನ್ನು ವಶಕ್ಕೆ ಪಡೆದು ನಾಶಪಡಿಸಿತು. ಸ್ಥಳದಲ್ಲಿ ಹಾಲು ಮತ್ತು ಕಲಬೆರಕೆಗೆ ಬಳಸಲಾಗುತ್ತಿದ್ದ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಹೆಚ್ಚಿನ ತಪಾಸಣೆಗಾಗಿ ಬೆಂಗಳೂರಿನ ಪಬ್ಲಿಕ್ ಹೆಲ್ತ್ ಇನ್ಸ್‌ಟಿಟ್ಯೂಟ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.


ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಮುಲಾಜಿಲ್ಲದೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.