ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಸ್ಪಷ್ಟನೆ । ಮುಸ್ಲಿಂ ಸಮುದಾಯದ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮುಸ್ಲಿಂ ಸಮಾಜದ ಬಗ್ಗೆ ಎಂದೂ ಟೀಕಿಸಿ ಮಾತನಾಡಿಲ್ಲ. ದುಷ್ಕೃತ್ಯದಲ್ಲಿ ತೊಡಗುವವರ ವಿರುದ್ಧವಷ್ಟೇ ಮಾತನಾದಿದ್ದೇನೆ ಎಂಬುದನ್ನು ಆ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಸ್ಪಷ್ಟಪಡಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೀಟ್ ಪ್ರತಿಭಟನೆ ವೇಳೆ ಜೀಪಿನ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದ ಒಬ್ಬ ಮುಲ್ಲಾನ ಉಲ್ಲೇಖಿಸಿ ಮಾತನಾಡಿದ್ದೇನೆ. ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದೇ ಹೊರತು, ಮುಸ್ಲಿಂ ಸಮುದಾಯದ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದು ಹೇಳಿದರು.ಜಿಹಾದಿಗಳು, ಭಯೋತ್ಪಾದಕರು ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಕ್ರಿಮಿನಲ್‌ಗಳ ವಿರುದ್ಧ ಮಾತನಾಡಿದ್ದೇನೆ. ಮುಸ್ಲಿಂ ಸಮಾಜದ ವಿರುದ್ಧ ಒಂದೇ ಒಂದು ಪದವೂ ಬಳಸಿಲ್ಲ. ಕೆಲವು ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿ ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿ ರುವಂತೆ ಪ್ರಸಾರ ಮಾಡಿವೆ. ಇದರಿಂದ ತಪ್ಪು ಸಂದೇಶ ಹೋಗಿದ್ದು, ಅಂತಹ ಮಾಧ್ಯಮಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ತಮ್ಮ ವಿರುದ್ಧ ದೂರು ನೀಡಿರುವ ವ್ಯಕ್ತಿ ಮತ್ತು ತಾವು ಉಲ್ಲೇಖಿಸಿದ ಕ್ರಿಮಿನಲ್ ವ್ಯಕ್ತಿ ನಡುವೆ ಯಾವುದೇ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬಂಧನಕ್ಕೆ ಹೆದರುವುದಿಲ್ಲ:
ಸುಳ್ಳು ಪ್ರಕರಣ ದಾಖಲಿಸಿ ಬೆದರಿಸುವ ಪ್ರಯತ್ನ ನಡೆದರೂ ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವ ಭಯೋತ್ಪಾದನೆ, ಜಿಹಾದಿ ಚಟುವಟಿಕೆಗಳು ಹಾಗೂ ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಮುಂದೆಯೂ ಧ್ವನಿ ಎತ್ತುತ್ತೇನೆ. ಬಂಧನಕ್ಕೆ ಹೆದರುವುದಿಲ್ಲ. ಅಗತ್ಯವಿದ್ದರೆ ನ್ಯಾಯಾಲಯ ಮತ್ತು ಜನತಾ ನ್ಯಾಯಾಲಯದಲ್ಲೂ ತಮ್ಮ ನಿಲುವು ಸಮರ್ಥಿಸಿಕೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿವಾಲ್ಮೀಕಿ ನಿಗಮ ಹಗರಣ, ಅರ್ಕಾವತಿ ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಹೊಣೆಗಾರಿಕೆ ಏನು ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಸ್ಪಂದಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇದೇ ಮಾದರಿ ಕ್ರಮವನ್ನು ಕರ್ನಾಟಕದಲ್ಲಿ ಕೆಪಿಎಸ್‌ಸಿ ಸೇರಿದಂತೆ ವಿವಿಧ ನೇಮಕಾತಿ ಹಗರಣಗಳಲ್ಲೂ ಕೈ ಗೊಳ್ಳಬೇಕು ಎಂದು ಆಗ್ರಹಿಸಿದರು.ಈ ವೇಳೆ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ವಕ್ತಾರ ಎಚ್.ಎಸ್ ಪುಟ್ಟಸ್ವಾಮಿ ಉಪಸ್ಥಿತರಿದ್ದರು.---
ಬಾಕ್ಸ್‌ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಆರೋಪಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಕಾಫಿ ಅಥವಾ ಚಹಾವನ್ನೇ ಸೇವಿಸದ ವ್ಯಕ್ತಿಯಾಗಿದ್ದರೂ ತಮ್ಮನ್ನು ಮದ್ಯಪಾನಿ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಯುವ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಪುಟದಲ್ಲಿ ತಮ್ಮ ಬಗ್ಗೆ ಇಂತಹ ಪೋಸ್ಟ್‌ಗಳನ್ನು ಹಾಕಲಾಗಿದೆ. ವೈಚಾರಿಕವಾಗಿ ಎದುರಿಸಲು ಸಾಧ್ಯವಾಗದ ಕಾರಣ ವ್ಯಕ್ತಿತ್ವ ಹರಣ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಅವಹೇಳನಕಾರಿ ಹಾಗೂ ಸುಳ್ಳು ಪ್ರಚಾರ ನಡೆಸಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರವಿ ಆಗ್ರಹಿಸಿದರು.
ಫೋಟೋ
ಚಿಕ್ಕಮಗಳೂರಿನ ಗುರುದತ್ತ ನಿವಾಸದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಭಾನುವಾರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ ಕಲ್ಮರುಡಪ್ಪ ಸೇರಿದಂತೆ ಮೊದಲಾದವರಿದ್ದರು.