ಕಳಸಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗಮಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಯುವ ಪೀಳಿಗೆಗೆ ಮನೆಯಲ್ಲಿ ಕಾವ್ಯ ಕಲಿಕೆ ವಾತಾವರಣವನ್ನು ಹಿರಿಯರು ಸೃಷ್ಟಿಸಿಕೊಡಬೇಕು ಎಂದು ಕಳಸಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ವಿ.ಕೆ.ರಾಜೇಶ್ ಹೇಳಿದರು.
ಕಳಸಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗಮಕ ಕಾರ್ಯಕ್ರಮದಲ್ಲಿ ಮಾತನಾಡಿ ಅತ್ಯಂತ ಪ್ರಾಚೀನವಾದ ಗಮಕ ಕಲೆ ಸಂಸ್ಕಾರ ನೀಡುವಂತದ್ದು, ಕುಮಾರ ವ್ಯಾಸನು ತನ್ನನ್ನು ಮಹಾಭಾರತ ಬರೆದ ವ್ಯಾಸ ಮಹರ್ಷಿಯ ಪುತ್ರ ಎಂದು ತಿಳಿದುಕೊಂಡು ಕರ್ನಾಟ ಕಥಾ ಮಂಜರಿ ರಚನೆಯಿಂದ. ಈತನ ಪ್ರತಿ ಭಾಮಿನಿ ಷಟ್ಪದಿಗಳಲ್ಲೂ ಪದ ಚಮತ್ಕಾರವಿದೆ. ಇದನ್ನು ಅರಿತುಕೊಂಡರೆ, ಕತೆಯನ್ನು ಹೀಗೂ ಹೇಳಬಹುದೇ ಎನಿಸುತ್ತದೆ. ಮಕ್ಕಳು ಮನೆಯಲ್ಲಿ ಇವುಗಳನ್ನು ಗಮನಿಸಿದರೆ ಜ್ಞಾನ ವಿಸ್ತಾರವಾಗುತ್ತದೆ. ಅದಕ್ಕೆ ಹಿರಿಯರು ಮನೆಯಲ್ಲಿ ಕಾವ್ಯ ಕಲಿಕೆಯ ವಾತಾವರಣ ಸೃಷ್ಟಿಸಬೇಕು ಎಂದರು.ಪ್ರಾಚಾರ್ಯ ಎಚ್.ಎಂ.ನಾಗರಾಜರಾವ್ ಮಾತನಾಡಿ ಕಲೆಗಳ ಕುರಿತು ಪೂಜ್ಯ ಭಾವವಿದ್ದಾಗ ಅದರ ಶಾಸ್ತ್ರೀಯತೆ ಉಳಿಯುತ್ತದೆ. ಕಲಾವಿದ ತನ್ನ ಕಲೆ ಆಶಯಗಳನ್ನು ಮೊದಲು ತಾನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದ್ವಿತೀಯ ಪಿಯುಸಿ ಗೆ ಪಠ್ಯವಾಗಿರುವ ಇನ್ನು ಹುಟ್ಟದೇ ಇರಲಿ ನಾರಿಯರ್ ಎನ್ನವೊಲು ಕಾವ್ಯ ಭಾಗವನ್ನು ನಾಗರಾಜರಾವ್ ಕಲ್ಕಟ್ಟೆಯವರು ಆರಭಿ, ರೇವತಿ, ಅಭೇರಿ, ಹಿಂದೋಳ, ಕೀರವಾಣಿ ಮುಂತಾದ ರಾಗಗಳ ಬಳಸಿ ವಾಚಿಸಿದರು. ಮಹಾಭಾರತದ ವಿವಿಧ ಹಂತಗಳನ್ನು ವಿಶ್ಲೇಷಿಸುತ್ತಾ ರಾಜೇಶ್ ಅವರು ಪ್ರಸಂಗ ಸಂದರ್ಭ ವ್ಯಾಖ್ಯಾನಿಸಿದರು. ಉಪನ್ಯಾಸಕಿಯರಾದ ಗೀತಾ, ಭೂಮಿಕ, ಉಪನ್ಯಾಸಕ ಚೇತನ್, ಸುಗಂಧ್ ಕುಮಾರ್, ರೋಹಿಣಿ , ನಯನಾ, ಮಧುರ, ಭುವನ್, ಚಂದನ್ ಉಪಸ್ಥಿತರಿದ್ದರು.