ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪತ್ರಿಕಾ ವೃತ್ತಿ ಸಾಮಾಜಿಕ ಜವಾಬ್ದಾರಿ ಕೆಲಸವೇ ಆಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಪ್ರೊ.ಸಪ್ನಾ ಎಂ.ಎಸ್. ಅಭಿಪ್ರಾಯಪಟ್ಟಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ನಡೆದ ‘ಕೊಡಗು ಪತ್ರಿಕಾ ಭವನದ 23ನೇ ವಾರ್ಷಿಕೋತ್ಸವ’ ಉದ್ಘಾಟಿಸಿದ ಅವರು ಮುಖ್ಯ ಭಾಷಣ ಮಾಡಿದರು.ವಕೀಲ, ವೈದ್ಯ ಸಮೂಹದ ಸೇವೆಯಂತೆಯೆ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವವರೂ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿ ಹೊಂದಿರುತ್ತಾ. ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳೊಂದಿಗೆ ತಾಂತ್ರಿಕವಾಗಿಯೂ ಸಾಕಷ್ಟು ಬದಲಾವಣೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಈ ಬದಲಾವಣೆಗಳಿಗೆ ಪತ್ರಿಕಾ ಕ್ಷೇತ್ರದಲ್ಲಿರುವವರು ಹೊಂದಿಕೊಳ್ಳುವ ಪ್ರಯತ್ನಗಳಿಗೆ ಮುಂದಾಗುವುದು ಅತ್ಯವಶ್ಯ ಎಂದು ಅವರು ಅಭಿಪ್ರಾಯಪಟ್ಟರು.
ಬದಲಾಗುತ್ತಿರುವ ಪರಿಸ್ಥಿತಿಗಳ ನಡುವೆ ಹೊಸ ವಿಚಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಕಿವಿ ಮಾತುಗಳನ್ನಾಡಿದ ಅವರು, ಪತ್ರಿಕೋದ್ಯಮ ಶಿಕ್ಷಣವೆನ್ನುವುದು ಕೇವಲ ಪದವಿ ಗಳಿಕೆಗೆ ಸೀಮಿತವಾಗಕೂಡದು. ಅದನ್ನು ಮೀರಿ ಹೊಸ ವಿಚಾರಗಳತ್ತ ನಮಮ್ಮ ಚಿಂತನೆ ಹರಿಸಬೇಕೆಂದು ತಿಳಿಸಿದರು.ಸುಳ್ಯದ ಸಮಾಜ ಸೇವಕ, ಹಿರಿಯ ಪತ್ರಕರ್ತ ಎಂ.ಬಿ. ಸದಾಶಿವ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಉಳಿಸುವ ನಿಟ್ಟಿನ ಕಾರ್ಯಕ್ಕಾಗಿಯೇ ಪತ್ರಿಕಾ ಕ್ಷೇತ್ರವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪರಿಗಣಿಸಲಾಗಿದೆ. ಹೀಗಿದ್ದೂ ವಿಶ್ವ ಮಟ್ಟದ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತ ಅತೀ ಕೆಳಗಿನ ಸ್ಥಾನದಲ್ಲಿದೆಯೆಂದು ವಿಷಾದಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವ ಜಿಲ್ಲೆಯ ಎಲ್ಲರಿಗೂ ಅನುಕೂಲರವಾಗಲಿ ಎನ್ನುವ ಚಿಂತನೆಗಳಡಿ ವಿವಿಧೋದ್ದೇಶಗಳ ಪತ್ರಿಕಾ ಭವನ ನಿರ್ಮಿಸಲಾಗಿದೆ ಎಂದರು.ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿದರು. ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಪ್ರೊ.ಸಪ್ನಾ ಎಂ.ಎಸ್. ಮತ್ತು ಎಂ.ಬಿ. ಸದಾಶಿವ ಅವರನ್ನು ಗೌರವಿಸಲಾಯಿತು.ವಾರ್ಷಿಕೋತ್ಸವ ಹಿನ್ನೆಲೆ ಆಯೋಜಿತ ಒಳಾಂಗಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಗಾಯಕ ಲಿಯಾಕತ್ ಅಲಿ ಪ್ರಾರ್ಥಿಸಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿದರು. ಟ್ರಸ್ಟಿ ಅನಿಲ್ ಎಚ್.ಟಿ. ಮತ್ತು ವಿನೋದ್ ಮೂಡಗದ್ದೆ ನಿರೂಪಿಸಿದರು. ಟ್ರಸ್ಟ್ ಖಜಾಂಚಿ ಕೆ. ತಿಮ್ಮಪ್ಪ ಮತ್ತು ಟಸ್ಟಿ ಮಧೋಷ್ ಪೂವಯ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಟ್ರಸ್ಟಿ ಶ್ರೀಧರ್ ಹೂವಲ್ಲಿ ವಂದಿಸಿದರು.