ಸಾರಾಂಶ
ಧಾರವಾಡ: ಹು-ಧಾ ಅವಳಿ ನಗರದ ಎಲ್ಲ ವಾರ್ಡ್‌ಗಳಿಗೆ 24 ಗಂಟೆ ಕಾಲ ಕುಡಿಯುವ ನೀರು ಒದಗಿಸುವ ಯೋಜನೆ ಪ್ರಗತಿಯಲ್ಲಿದೆ. ಶೇ. 10ರಷ್ಟು ಕಾಮಗಾರಿ ಮಾತ್ರ ಬಾಕಿ ಇದ್ದು, ಶೀಘ್ರ ಅವಳಿ ನಗರದ ಜನತೆಗೆ ನಿರಂತರ ನೀರು ಭಾಗ್ಯ ದೊರೆಯಲಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಸವದತ್ತಿ ಮತ್ತು ಅಮ್ಮಿನಬಾವಿ ಜಾಕವೆಲ್‌ನ್ನು ಸ್ವತಃ ಪರಿಶೀಲಿದ್ದೇನೆ. ಶೇ. 90ರಷ್ಟು ಕಾಮಗಾರಿ ಮುಗಿದಿದ್ದು, ಸದ್ಯ ಎಂಟತ್ತು ದಿನಕ್ಕೊಮ್ಮೆ ಬರುವ ನೀರು ಐದು ದಿನಕ್ಕೊಮ್ಮೆ ಪೂರೈಸುವಲ್ಲಿ ಕ್ರಿಯಾಯೋಜನೆ ರೂಪಿಸಿದೆ. ತದನಂತರ ಶೇ. 100ರಷ್ಟು ಕಾಮಗಾರಿಯಾದ ನಂತರ ನಿರಂತರ ನೀರು ಪೂರೈಸಲಾಗುವುದು ಎಂದರು.ಮಹಾನಗರ ಪಾಲಿಕೆಯನ್ನು ಮಾದರಿ ಮಾಡುವ ನಿಟ್ಟಿನಲ್ಲಿ ನೀರು, ನೈರ್ಮಲ್ಯ ಹಾಗೂ ಸೌಂದರ್ಯ ಹೆಚ್ಚಿಸಲು ಮೊದಲ ಆದ್ಯತೆ ಮೇರೆಗೆ ಕನಸಿನ ಯೋಜನೆ ರೂಪಿಸಲಾಗುತ್ತಿದೆ. ತ್ಯಾಜ್ಯ ಕ್ರೊಢೀಕರಣಕ್ಕೆ ಜಾಗದ ಕೊರತೆ ಉಂಟು. ಹೀಗಾಗಿ ಅವಳಿ-ನಗರದಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ದೊಡ್ಡ ಸವಾಲಾಗಿದೆ. ಈ ಹಿನ್ನಲೆ ಅಲ್ಲಲ್ಲಿ ಬಿದ್ದ ತ್ಯಾಜ್ಯದ ಗುಡ್ಡ ಕರಗಿಸಲು ಬಯೋ ಮೈನಿಂಗ್ ಯೋಜನೆ ರೂಪಿಸಿದ್ದಾಗಿ ತಿಳಿಸಿದರು.
ಅವಳಿ ನಗರ ನಿತ್ಯವೂ ಬೆಳೆಯುತ್ತಿದೆ. ಅನೇಕ ಯೋಜನೆ ಕಾಮಗಾರಿ ನೆನಗುದಿಗೆ ಬಿದ್ದಿವೆ. ಖಾಸಗಿ ಕಂಪನಿಗಳ ಜತೆ ಮಾತುಕತೆ ನಡೆಸಿ, ಸಿಎಸ್‌ಆರ್ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಿ, ಸೌಂದರ್ಯೀಕರಣಕ್ಕೆ ಒತ್ತು ನೀಡಿದ್ದಾಗಿ ತಿಳಿಸಿದ ಜ್ಯೋತಿ ಪಾಟೀಲ, ಪಾಲಿಕೆಯ ವ್ಯಾಪ್ತಿಯಲ್ಲಿ ಹಲವು ಉದ್ಯಾನಗಳಿದ್ದು, ಅವುಗಳು ನಿರ್ವಹಣೆ ಕೊರತೆ ಕಾರಣಕ್ಕೆ ಸೊರಗಿವೆ. ಅವುಗಳಿಗೆ ಮರುಜೀವ ತುಂಬುವ ದೃಷ್ಟಿಯಿಂದ ಅವುಗಳ ನಿರ್ವಹಣೆ ಜವಾಬ್ದಾರಿ ಒಂದೆರಡು ವರ್ಷಕ್ಕೆ ಗುತ್ತಿಗೆ ನೀಡುವ ಚಿಂತನೆ ನಡೆಸಿದ್ದಾಗಿ ಹೇಳಿದರು.ಸೂಪರ್ ಮಾರ್ಕೆಟ್, ನೆಹರೂ ಮಾರ್ಕೆಟ್ ಮಹಿಳಾ ವ್ಯಾಪಾರಸ್ಥರ ಅನುಕೂಲಕ್ಕೆ ಸೂಕ್ತವಾದ ಸ್ಥಳ ಗುರುತಿಸಿ, ಪಿಂಕ್ ಶೌಚಾಲಯ ನಿರ್ಮಿಸುವ ಚಿಂತಿಸಲಾಗಿದೆ. ನೀರು, ವ್ಯಾಪರಸ್ಥರಿಗೆ ಕಟ್ಟೆ ಹಾಗೂ ಶೆಡ್ ವ್ಯವಸ್ಥೆ ಶೀಘ್ರವೇ ಕಲ್ಪಿಸುವ ಭರವಸೆ ನೀಡಿದರು.
ಪಾಲಿಕೆ ಒಡೆತನದ ಹೆರಿಗೆ ಆಸ್ಪತ್ರೆ ನಿರ್ವಹಣೆ ಕುರಿತು ಒಂದಿಷ್ಟು ಚರ್ಚೆ ನಡೆದಿವೆ. ಆಸ್ಪತ್ರೆ ಆರೋಗ್ಯ ಇಲಾಖೆಗೆ ಹಸ್ತಾಂತರದ ಸಲಹೆ ಬಂದಿದೆ ಎಂದ ಮೇಯರ್ ಜ್ಯೋತಿ ಪಾಟೀಲ, ಆಸ್ಪತ್ರೆ ಆಸ್ತಿಯನ್ನು ಪಾಲಿಕೆಯ ಒಡೆತನದಲ್ಲಿ ಇಟ್ಟುಕೊಂಡು, ನಿರ್ವಹಣೆ ಜವಾಬ್ದಾರಿ ಮಾತ್ರವೇ ಆರೋಗ್ಯ ಇಲಾಖೆ ಹಸ್ತಾಂತರಿಸುವ ಕುರಿತು ಶಾಸಕರಾದ ಅರವಿಂದ ಬೆಲ್ಲದ ಅವರೊಂದಿಗೆ ಚರ್ಚಿಸುವುದಾಗಿ ಕೂಡ ಪ್ರಶ್ನೆಗೆ ಉತ್ತರಿಸಿದರು. ಈ ಸಂದರ್ಭದಲ್ಲಿ ಗಿಲ್ಡ್ ಪದಾಧಿಕಾರಿಗಳು, ಸದಸ್ಯರಿದ್ದರು.ಎನಿಮಲ್ ಝೋನ್: ಶಿವಳ್ಳಿ ಗ್ರಾಮದ ಹತ್ತಿರ 67 ಎಕರೆ ಜಾಗದಲ್ಲಿ ಎನಿಮಲ್ ಝೋನ್ ನಿರ್ಮಿಸುವ ಉದ್ದೇಶ ಹೊಂದಿದೆ. ಬಿಡಾಡಿ ದನಗಳು ಮತ್ತು ನಾಯಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಲಿದೆ. ಅವುಗಳಿಗೆ ಅಲ್ಲಿ ಆಹಾರ-ನೀರು ಪೂರೈಸಲಿದೆ. ಈ ಬಗ್ಗೆ ಆರೋಗ್ಯ ಸ್ಥಾಯಿ ಸಮಿತಿ ಜತೆ ಚರ್ಚಿಸಿದೆ. ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಯೂ ನಡೆಸಿದೆ ಎಂದರು ಮೇಯರ್ ಜ್ಯೋತಿ ಪಾಟೀಲ.