ಸಾರಾಂಶ
- ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ಶ್ರಾವಣ ಸಾಹಿತ್ಯ ಸಂಭ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಶ್ರಾವಣ ಮಾಸದಿಂದ ಹಬ್ಬಗಳ ಸರ ಮಾಲೆ ಪ್ರಾರಂಭವಾಗಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ತಿಳಿಸಿದರು.
ಸೋಮವಾರ ತಾಲೂಕು ಕಸಾಪ ಆಶ್ರಯದಲ್ಲಿ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ ಶ್ರಾವಣ ಮಾಸದ ಹಬ್ಬಗಳ ಬಗ್ಗೆ ಉಪನ್ಯಾಸ ನೀಡಿದರು. ಆಷಾಡ ಕಳೆದು ಶ್ರಾವಣ ಮಾಸಕ್ಕೆ ಕಾಲಿಡುವಾಗ ಇಂಪಾಗಿ ಕೋಗಿಲೆಗಳು ಕೂಗುತ್ತವೆ. ನಾಗರ ಪಂಚಮಿ ಯಿಂದ ಹಬ್ಬಗಳ ಸರಮಾಲೆ ಪ್ರಾರಂಭವಾಗಲಿದೆ ಎಂದರು.ಶಾಲಾ ಕಾಲೇಜುಗಳ ಮಕ್ಕಳಿಗೆ ಸಾಮಾನ್ಯ ಜ್ಞಾನದ ಅವಶ್ಯಕತೆ ಇದೆ. ತಾಲೂಕು ಕಸಾಪ ರಸ ಪ್ರಶ್ನೆ ಕಾರ್ಯಕ್ರಮದ ಮೂಲಕ ಸಾಮಾನ್ಯ ಜ್ಞಾನ ನೀಡುತ್ತಿದೆ. ಈ ಸಾಮಾನ್ಯ ಜ್ಞಾನವನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಕೊಳ್ಳಬೇಕು, ಶಾಲೆ ಪಠ್ಯ ಚಟುವಟಿಕೆ ಜೊತೆಗೆ ಪುಸ್ತಕ ಓದುವುದು, ದಿನ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಮಕ್ಕಳಿಗೆ ರಸ ಪ್ರಶ್ನೆ ನಡೆಸಿ ಗೆದ್ದ ತಂಡ ಗಳಿಗೆ ಬಹುಮಾನ. ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಸನ್ಮಾನ ಮಾಡಿ ಗೌರವಿಸುತ್ತಿದ್ದೇವೆ. ಕನ್ನಡ ಶಿಕ್ಷಕರನ್ನು ಸಹ ಗೌರವಿಸಿ ಕನ್ನಡ ಭಾಷೆಗೆ ಗೌರವ ನೀಡುತ್ತಿದ್ದೇವೆ ಎಂದರು.ಅಲ್ಲದೆ ಮುಂದಿನ ದಿನಗಳಲ್ಲಿ ಕಸಾಪದಿಂದ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ, ದತ್ತಿ ಉಪನ್ಯಾಸ, ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ, ಪತ್ರಕರ್ತರೊಂದಿಗೆ ಸಂವಾದ, ಪ್ರತಿಭಾ ಪುರಸ್ಕಾರ ನಡೆಸಲಿದ್ದೇವೆ ಎಂದರು.
ಕೆಪಿಎಸ್ ನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಕ್ಷ್ಮಣ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಜೂನಿಯರ್ ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕರಿದ್ದಾರೆ. ಆದರೆ, ಕೆಲವು ಮೂಲಭೂತ ಸೌಕರ್ಯ ಕೊರತೆ ಇದೆ. ಕೊಠಡಿ ಅಗತ್ಯ. ಮಕ್ಕಳು ಪಠ್ಯ ಚಟುವಟಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ತಾಲೂಕು ಕಸಾಪ ಮಕ್ಕಳಿಗೆ ರಸ ಪ್ರಶ್ನೆ ಅರ್ಥಪೂರ್ಣವಾಗಿದೆ ಎಂದರು.ಇದೇ ಸಂದರ್ಭದಲ್ಲಿ 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಕು.ಪ್ರಣಿತ ರನ್ನು ಸನ್ಮಾನಿಸಲಾಯಿತು. ರಸ ಪ್ರಶ್ನೆಯಲ್ಲಿ ಗೆದ್ದ ತಂಡಗಳಿಗೆ ಪ್ರಥಮ ,ದ್ವಿತೀಯ,ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಮುಖ್ಯ ಅತಿಥಿಯಾಗಿದ್ದ ಪಪಂ ಅಧ್ಯಕ್ಷೆ ಜುಬೇದ, ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ, ಕಸಾಪ ಹೋಬಳಿ ಅಧ್ಯಕ್ಷ ಉದಯ ಗಿಲ್ಲಿ, ಜೇಸಿ ಪೂರ್ವಾಧ್ಯಕ್ಷ ಚರಣರಾಜ್, ಕನ್ನಡ ಶಿಕ್ಷಕಿ ಅನ್ನಪೂರ್ಣ, ಉಪನ್ಯಾಸಕಿ ಶುಭ, ಶಿಕ್ಷಕ ಕುಮಾರ್, ಭಾನುಶಿವರಾಜ್ ಉಪಸ್ಥಿತರಿದ್ದರು.