ಹೊನ್ನೇಕೊಡಿಗೆ ಸೇತುವೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ । ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮಾಹಿತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣದ ರಸ್ತೆ ಅಗಲೀಕರಣಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಜೂರು ಮಾಡಿದ ₹60 ಕೋಟಿಯಲ್ಲಿ ₹25 ಕೋಟಿ ಬಿಡುಗಡೆಯಾಗಿ ಉಪ ವಿಭಾಗಾಧಿಕಾರಿಗಳ ಖಾತೆಗೆ ಜಮಾ ಆಗಿದೆ ಎಂದು ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಪ್ರಥಮ ಹಂತದಲ್ಲಿ ಪ್ರವಾಸಿ ಮಂದಿರದಿಂದ ಪೊಲೀಸ್ ಠಾಣೆಯವರೆಗೆ ರಸ್ತೆ ಅಗಲೀಕರಣವಾಗಲಿದೆ.ಇದರಲ್ಲಿ 161 ಖಾತೆದಾರರ ಮನೆ, ಅಂಗಡಿ ಇದೆ. ಇವರಲ್ಲಿ 150 ಜನ ಸ್ವಯಂ ಒಪ್ಪಿಗೆ ಪತ್ರ ಹಾಗೂ ಎಲ್ಲಾ ದಾಖಲೆ ನೀಡಿದ್ದಾರೆ. ಅವರ ಖಾತೆಗಳಿಗೆ ಮುಂದಿನ 2-3 ದಿನಗಳಲ್ಲಿ ಪರಿಹಾರ ಹಣ ಜಮಾ ಮಾಡಲಾಗುವುದು. ಉಳಿದ 11 ಜನ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜಯಪುರ, ಬಾಳೆಹೊನ್ನೂರು ಭಾಗದಲ್ಲಿ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಪರಿಹಾರ ನೀಡಿರಲಿಲ್ಲ. ನಾನು ಹುಟ್ಟೂರಿನ ಅಭಿಮಾನದಿಂದ ರಸ್ತೆ ಅಗಲೀ ಕರಣದ ಬಗ್ಗೆ ತೀವ್ರ ಆಸಕ್ತಿವಹಿಸಿ ನನ್ನ ಹಾಗೂ ಸಿದ್ದರಾಮಯ್ಯ ಅವರ 40 ವರ್ಷದ ಸ್ನೇಹವನ್ನು ಉಪಯೋಗಿಸಿಕೊಂಡು ಸತತವಾಗಿ 2-3 ವರ್ಷ ಪ್ರಯತ್ನ ಪಟ್ಟು ಪರಿಹಾರ ನೀಡಲು ₹60 ಕೋಟಿ ಮಂಜೂರು ಮಾಡಿಸಿದ್ದೇನೆ. ಆ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ತುಂಬಾ ಸಹಕಾರ ನೀಡಿದ್ದರು ಎಂದು ನೆನಪಿಸಿಕೊಂಡರು.

ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರದಿಂದ ಪೊಲೀಸ್ ಠಾಣೆವರೆಗೆ ಮೊದಲ ಹಂತದ ರಸ್ತೆ ಅಗಲೀಕರಣ ವಾಗಲಿದೆ. 2ನೇ ಹಂತದಲ್ಲಿ ಪಪಂ ಮುಂಭಾಗದಿಂದ ಸುಂಕದ ಕಟ್ಟೆವರೆಗೆ ರಸ್ತೆ ಅಗಲೀಕರಣವಾಗಲಿದೆ. 130 ವರ್ಷದ ನಂತರ ಪ್ರಥಮ ಬಾರಿಗೆ ರಸ್ತೆ ಅಗಲೀಕರಣ ಮಾಡುತ್ತಿದ್ದೇವೆ.1 ವರ್ಷದ ಒಳಗೆ ಇದು ಪೂರ್ತಿ ಆಗಲಿದೆ. ನರಸಿಂಹರಾಜಪುರದವರು ಸಹಕಾರ ನೀಡಬೇಕು. ಸರ್ಕಾರದ ಮಾನದಂಡದಂತೆ ಪರಿಹಾರ ನೀಡಲಾಗುವುದು ಎಂದರು.


ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ ಶೆಟ್ಟಿ,ಮಾಜಿ ಅಧ್ಯಕ್ಷೆ ಜುಬೇದ, ಮಾಜಿ ಸದಸ್ಯರಾದ ಮಹಮ್ಮದ್ ವಸೀಂ, ಸುನೀಲ್ ಇದ್ದರು.

-- ಬಾಕ್ಸ್ --

ಮುಖ್ಯಮಂತ್ರಿಯಿಂದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಂತರ 3 ನೇ ಬಾರಿಗೆ ನರಸಿಂಹರಾಜಪುರಕ್ಕೆ ಆಗಮಿಸಿ ₹38. 50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ನ್ಯಾಯಾಲಯಕ್ಕೆ ಹೋಗಿರುವುದು ನೋವು ತಂದಿದೆ: ರಸ್ತೆ ಅಗಲೀಕರಣವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಒಪ್ಪಿಗೆ ನೀಡಿದವರಿಗೆ ತಕ್ಷಣ ಪರಿಹಾರ ಸಿಗಲಿದೆ. ನ್ಯಾಯಾಲಯಕ್ಕೆ ಹೋದವರಿಗೆ ತೀರ್ಪಿನ ನಂತರ ಪರಿಹಾರ ಸಿಗಲಿದೆ. ಅಲ್ಲಿವರೆಗೆ ಕಾಯಬೇಕಿದೆ. 11 ಖಾತೆದಾರರು ನ್ಯಾಯಾಲಯಕ್ಕೆ ಹೋಗಿರುವುದು ನನಗೆ ನೋವು, ಬೇಸರ ತಂದಿದೆ ಎಂದರು.