ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮ ಜೂ.21ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಮ್ಮ ಕ್ಷೇತ್ರದಿಂದ 2500 ಮಂದಿ 50 ಬಸ್ಸುಗಳಲ್ಲಿ ಭಾಗಿಯಾಗಲಿದ್ದೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ, ಪಕ್ಷದ ನೂತನ ಅಧ್ಯಕ್ಷರು ಕೆಪಿಸಿಸಿಯ ತಳಮಟ್ಟದ ಕಾರ್ಯಕರ್ತರಾಗಿ ದುಡಿದು ವಿವಿಧ ವಿಭಾಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಸಂಘಟನಾ ಚಾತುರ್ಯ ತೋರಿದವರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ 2028ಕ್ಕೆ ಕಾಂಗ್ರೆಸ್ ಮ್ಯಾಜಿಕ್ ಮಾಡಲಿದ್ದು 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ಒಬಿಸಿ ನಾಯಕನಿಗೆ ಅಧ್ಯಕ್ಷ ಪಟ್ಟ ಒಲಿದು ಬಂದಿದೆ. ನಾನೂ ಕೂಡ ಒಬಿಸಿ ಹುಡುಗನಾಗಿ ಅದನ್ನು ಸ್ವಾಗತಿಸುತ್ತೇನೆ ಎಂದರು.
2026ರ ನೀಟ್ ಕೋಚಿಂಗ್ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ನೀಟ್‌ನಲ್ಲಿ ಒಳ್ಳೆಯ ಸ್ಥಾನ ಪಡೆದಿದ್ದರು. ದುರಾದೃಷ್ಟಕ್ಕೆ ಮರುಪರೀಕ್ಷೆ ಇದೇ ಜೂನ್21ಕ್ಕೆ ನಡೆಯಲಿದೆ. ಇದೇ ರೀತಿ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮ ಪ್ರಾರಂಭವಾಗಿದೆ. ಶೀಘ್ರವೇ 56 ಸಾವಿರ ಹುದ್ದೆಗಳನ್ನು ನಮ್ಮ ಸರ್ಕಾರ ತುಂಬುತ್ತಿದೆ. ಇಲ್ಲಿ ತರಬೇತಿ ಪಡೆಯುವ ನೂರಾರು ವಿದ್ಯಾರ್ಥಿಗಳಲ್ಲಿ 30 ರಿಂದ 40 ಮಕ್ಕಳಾದರೂ ಎ.ಸಿ, ತಹಸೀಲ್ದಾರ್, ಡಿವೈಎಸ್ ಪಿ, ಪೊಲೀಸ್ ಇನ್‌ಸ್ಪೆಕ್ಟರ್ ಆಗಲಿ ಎನ್ನುವುದು ನನ್ನ ಮಹದಾಸೆ ಎಂದರು. ಮುಂದಿನ ಚುನಾವಣೆ ಬಗ್ಗೆ ಯೋಚಿಸುವವನು ನಾನಲ್ಲ. ಭಗವಂತ ಒಂದು ಅವಕಾಶ ಕೊಟ್ಟಿದ್ದಾನೆ. ಅದನ್ನು ಬಳಸಿಕೊಂಡು ನನ್ನ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರತಿ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಹೆಸರಾಂತ ಕೋಚಿಂಗ್ ಸೆಂಟರ್ ಪರಿಣಿತರು ಬಂದು ತರಬೇತಿ ಮಾಡಲಿದ್ದಾರೆ. ಯುವಕ ಯುವತಿಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದರು.ನಾನು ಮಾತು ಕೊಟ್ಟಂತೆ ಚುನಾವಣೆಗೂ ಮುನ್ನ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ. ಕ್ಷೇತ್ರದ ಎಲ್ಲಾ ನನ್ನ ತಾಯಂದಿರು ನನ್ನ ಮೇಲೆ ನಂಬಿಕೆಯಿಟ್ಟಿದ್ದಾರೆ. ಅವರ ನಂಬಿಕೆ ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತೇನೆ. ಗೃಹಜ್ಯೋತಿ, ಗೃಹಲಕ್ಷ್ಮೀ, ಪಂಚ ಗ್ಯಾರಂಟಿಗಳ ಜತೆಗೆ ನನ್ನ ಅಮ್ಮಾ ಆಂಬ್ಯುಲೆನ್ಸ್, ಸ್ಕಾಲರ್‌ಶಿಪ್, ವರಮಹಾಲಕ್ಷ್ಮಿಯ ಬಾಗಿನ ಹೀಗೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ. ಇವೆಲ್ಲಾ ಒಳ್ಳೆಯದಾಗುತ್ತದೆ. ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.
ಹೆಚ್.ಎನ್. ವ್ಯಾಲಿಗೆ ಬದ್ಧ: ಹೆಚ್.ಎನ್. ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣ ಮಾಡಬೇಕು ಎನ್ನುವ ನನ್ನ ಬದ್ಧತೆಯಲ್ಲಿ ಬದಲಾವಣೆಯಿಲ್ಲ. ಎಲ್ಲಾ ನೀರಾವರಿ ಹೋರಾಟಗಾರರಿಗೆ ಹೇಳುತ್ತೇನೆ. ನಾನೂ ಕೂಡ 3ನೇ ಹಂತದ ಶುದ್ಧಿಕರಣದ ಪರವಾಗಿ ಇರುವವನು. ಆದರೆ ನನ್ನೊಬ್ಬನಿಂದಲೇ ಈ ಕೆಲಸ ಮಾಡಲು ಆಗುವುದಿಲ್ಲ. ಚಿಂತಾಮಣಿ ಶಾಸಕರು, ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್ ನನಗಿಂತ ಹಿರಿಯರು, ಅನುಭವಸ್ಥರು, ಬಾಗೇಪಲ್ಲಿ ಸುಬ್ಬಾರೆಡ್ಡಿ ಕೂಡ ಅನುಭವಸ್ಥರೇ ಆಗಿದ್ದಾರೆ. ಅವರಿಗೆ ಪವರ್ ಇದೆ. 5 ಜನ ಶಾಸಕರನ್ನು ಒಪ್ಪಿಸಿ ಎಲ್ಲರೂ ಹೋಗಿ ಮುಖ್ಯಮಂತ್ರಿಗಳನ್ನು ಮನವೊಲಿಸೋಣ.ಎಲ್ಲಾ ಬಿಟ್ಟು ನನ್ನನ್ನು ಹಿಡಿದುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು. ಸಿಕೆಬಿ-3 ಸುದ್ದಿಗಾರರೊಂದಿಗೆ ಪ್ರದೀಪ್ ಈಶ್ವರ್ ಮಾತನಾಡಿದರು.