ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪ್ರಮುಖ ರಸ್ತೆಗಳು, ಫುಟ್‌ಪಾತ್ ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳಿಂದ ತಿಂಗಳಿಗೆ ಗರಿಷ್ಠ 30,000 ರು.ವರೆಗೆ ಅನಧಿಕೃತವಾಗಿ ಬಾಡಿಗೆಯನ್ನು ವಸೂಲಿ ಮಾಡಲಾಗುತ್ತಿದೆ!

ಅನಧಿಕೃತವಾಗಿ, ಅಕ್ರಮವಾಗಿ ನಡೆಯುವ ಈ ಬಾಡಿಗೆ ದಂಧೆಗೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು ಇದೆ ಎನ್ನುವ ಆರೋಪವಿದೆ. ಏಕೆಂದರೆ, ಅನಧಿಕೃತ ಬಾಡಿಗೆಯಲ್ಲಿ ಅವರಿಗೂ ಪಾಲು ಹೋಗುತ್ತದೆ. ಉದಾಹರಣೆಗೆ ನಗರದ ಅತ್ಯಂತ ಜನಪ್ರಿಯ ಹಾಗೂ ಹಳೆಯ ಫುಡ್ ಸ್ಟ್ರೀಟ್ ಆಗಿರುವ ವಿವಿ ಪುರ ಫುಡ್ ಸ್ಟ್ರೀಟ್‌ನಲ್ಲಿ ಬೀದಿಯಲ್ಲೇ ವ್ಯಾಪಾರ ನಡೆಯುತ್ತಿದೆ. ಇತ್ತೀಚೆಗೆ ರಸ್ತೆಯನ್ನು ವೈಟ್‌ಟಾಪಿಂಗ್ ಮಾಡಲಾಗಿದ್ದು ಬೀದಿಬದಿ ವ್ಯಾಪಾರಕ್ಕೆ ಹೇಳಿ ಮಾಡಿಸಿದಂತಿದೆ. ಅನೇಕ ಅಂಗಡಿ, ಮಳಿಗೆಗಳು ಇದ್ದರೂ ಫುಟ್‌ಪಾತ್ ಹಾಗೂ ರಸ್ತೆ ಮೇಲಿನ ವ್ಯಾಪಾರ ಜೋರಾಗಿರುತ್ತದೆ.

ಹೀಗೆ, ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುವ ಕೆಲವರು ಹತ್ತಿರದ ಅಂಗಡಿಯವರಿಗೆ ಮಾಸಿಕ ಬಾಡಿಗೆಯನ್ನು ಪಾವತಿ ಮಾಡುತ್ತಿದ್ದಾರೆ. ಈ ಅನಧಿಕೃತ ಬಾಡಿಗೆ ಸಂಗ್ರಹದಲ್ಲಿ ಹಫ್ತಾ ವಸೂಲಿ ಮಾಡುವವರಿಗೂ ತಲುಪುತ್ತದೆ. ನಿಯಮಿತವಾಗಿ ಹಣ ಪಾವತಿ ಮಾಡದಿದ್ದರೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂಬ ಆರೋಪಗಳು ಇವೆ.

ಬಾಡಿಗೆ ಸಂಗ್ರಹ ನಿಜ ಎಂದ ಸಂಘ:


ಬೀದಿ ಬದಿ ವ್ಯಾಪಾರಿಗಳಿಂದ ಬಾಡಿಗೆ ಸಂಗ್ರಹಿಸುವುದು ಕೆಲವು ಕಡೆ ನಡೆಯುತ್ತಿದೆ. ಹೀಗಾಗಿ, ಬೀದಿ ಬದಿ ವ್ಯಾಪಾರಿಗಳ ಶೋಷಣೆ ಮತ್ತು ಎತ್ತಂಗಡಿ ಮಾಡುವುದನ್ನು ತಪ್ಪಿಸಲು ವಿಶಾಲವಾದ ಫುಟ್‌ಪಾತ್ ಇರುವ ಕಡೆ ಅಧಿಕೃತವಾಗಿಯೇ ಪಾಲಿಕೆಯಿಂದ ಮಾರ್ಕಿಂಗ್ ಮಾಡಿಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದೇವೆ. ಈಗಾಗಲೇ ಮಲ್ಲೇಶ್ವರ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಜಾಗ ಮಾರ್ಕಿಂಗ್ ಮಾಡುವ ಯೋಜನೆ ಜಾರಿ ಮಾಡಲಾಗುತ್ತಿದೆ. ಇದರಿಂದ ಪಾಲಿಕೆಗೆ ಸ್ವಲ್ಪ ಆದಾಯವೂ ಬರುತ್ತದೆ. ವ್ಯಾಪಾರಿಗಳ ಶೋಷಣೆ ತಪ್ಪುತ್ತದೆ ಎಂದು ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿದರು.

ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಅನೇಕ ವರ್ಷಗಳಿಂದ ಬೀದಿಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳನ್ನು ಗುರುತಿಸಿ ಅವರು ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಅನಧಿಕೃತವಾಗಿ ವ್ಯಾಪಾರ ಮಾಡುವವರನ್ನು ಅಲ್ಲಿಂದ ತೆರವುಗೊಳಿಸಬೇಕು ಎನ್ನುವುದು ನಮ್ಮ ಸಂಘದ ಬೇಡಿಕೆಯಾಗಿದೆ ಎಂದು ರಂಗಸ್ವಾಮಿ ಹೇಳಿದರು.

ತೆರವು ಕಾರ್ಯಾಚರಣೆ ಪ್ರಶ್ನಿಸಿ ಕೋರ್ಟ್ ಮೊರೆ:

5 ಪಾಲಿಕೆಗಳಿಂದ ನಗರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಪ್ರಶ್ನಿಸಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಏಕಾಏಕಿ ತೆರವು ಮಾಡಬಾರದು ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಅನೇಕ ಬಾರಿ ಆದೇಶದಲ್ಲಿ ತಿಳಿಸಿವೆ. ಹೈದ್ರಾಬಾದ್, ದೆಹಲಿ, ಚಂಡಿಗಢ ಸೇರಿದಂತೆ ಅನೇಕ ಕಡೆಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆ, ಉಪ ಜೀವನ ಕಾಪಾಡಲು ಎತ್ತಂಗಡಿ ಮಾಡಬಾರದು ಎಂದು ಕೋರ್ಟ್ ಸೂಚನೆ ನೀಡಿವೆ. ಇದೇ ಆಧಾರದ ಮೇಲೆ ನಗರದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಪ್ರಶ್ನಿಸಿ ಸಂಘದ ಮೂಲಕವೇ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಅವರು ತಿಳಿಸಿದರು.