ಸಾರಾಂಶ
ಹಾವೇರಿ:ಈಗಾಗಲೇ ಸರ್ಕಾರ ಘೋಷಣೆ ಮಾಡಿದಂತೆ ಟನ್ ಕಬ್ಬಿಗೆ ₹ 3,300 ದರವನ್ನು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಸೋಮವಾರದಿಂದ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಅಹೋರಾತ್ರಿ ಧರಣಿ ಪ್ರತಿಭಟನೆಯನ್ನು ಆರಂಭಿಸಿದರು.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರು, ಬೆಳಗಾವಿ, ಬಾಗಲಕೋಟೆ ರೈತರಿಗೆ 11.25 ಇಳುವರಿ ಆಧಾರದ ಮೇಲೆ 3,300 ರು. ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಆದರೆ ಹಾವೇರಿ ಜಿಲ್ಲೆಯಲ್ಲೂ ಸರಾಸರಿ ಅಷ್ಟೇ ರಿಕವರಿ ಬರುತ್ತದೆ. ಕಾರ್ಖಾನೆಯವರು ಇಳುವರಿ ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ದ್ರೋಹ ಮಾಡುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆಯಲ್ಲಿ 11.25 ಇಳುವರಿ ಬರುತ್ತದೆ ಎಂದು ಟನ್ ಕಬ್ಬಿಗೆ 3,300 ರು.ಘೋಷಣೆ ಮಾಡಿದ್ದಾರೆ. ಆದರೆ ಹಾವೇರಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳು 9.42 ಇಳುವರಿ ತೋರಿಸಿ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿವೆ. ಉತ್ತರ ಕರ್ನಾಟಕದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿ ಮಾಡಿ ನೀಡಬೇಕೆಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಈ ವೇಳೆ ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರು, ಡಿಸಿಯವರ ಜತೆಗೆ ಸುದೀರ್ಘ ಚರ್ಚೆ ನಡೆಯಿತು. ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರೂ ಪಟ್ಟು ಸಡಿಲಿಸದ ಪ್ರತಿಭಟನಾಕಾರರು ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸಿದರು. ಬುಧವಾರದೊಳಗೆ ಸಕ್ಕರೆ ಸಚಿವರೇ ಬಂದು ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿ, ಬಗೆಹರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಗುರುವಾರದಿಂದ ಜಿಲ್ಲೆಯಲ್ಲಿರುವ ಮೂರು ಸಕ್ಕರೆ ಕಾರ್ಖಾನೆಗಳನ್ನು ಬಂದ್ ಮಾಡಿಸಿ, ಹೋರಾಟ ನಡೆಸಲಾಗುವುದು ಎಂದರು.ಜಿಲ್ಲೆಯ ಕಬ್ಬು ಬೆಳೆಗಾರರಿಗೂ ಟನ್ ಕಬ್ಬಿನ ದರ 3,300 ರು.ನಿಗದಿ ಮಾಡುವವರೆಗೂ ಜಿಲ್ಲೆಯಲ್ಲಿ ಯಾವ ರೈತರು ಕಬ್ಬು ಕಟಾವು ಮಾಡಿಸಬಾರದು. ಈಗಾಗಲೇ ಕಬ್ಬು ಕಟಾವು ಮಾಡಿಸಿರುವ ರೈತರು ಎರಡು ದಿನದೊಳಗಾಗಿ ಕಾರ್ಖಾನೆಗೆ ಸರಬರಾಜು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಕಟಾವು ಮಾಡದೇ ಸ್ಥಗಿತಗೊಳಿಸುವಂತೆ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಕಬ್ಬು ಬೆಳೆಗಾರರಿಗೆ ಕರೆ ನೀಡಿದರು. ಅದೇ ರೀತಿ ಎಲ್ಲ ಕಬ್ಬು ಬೆಳೆಗಾರರು. ರೈತರು, ರೈತ ಸಂಘಟನೆಯವರು, ವಿವಿಧ ಸಂಘ ಸಂಸ್ಥೆಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
;Resize=(128,128))
;Resize=(128,128))
;Resize=(128,128))