ಸಾಂಸ್ಕೃತಿಕ ರಾಯಭಾರಿಗಳಾಗಲಿ ಕನ್ನಡದ ಪ್ರಾಧ್ಯಾಪಕರು

| Published : Nov 11 2025, 02:15 AM IST

ಸಾರಾಂಶ

ಕಲಿಯುವುದು, ಕಲಿಸುವುದು ಒಂದು ನಿರಂತರ ಪ್ರಕ್ರಿಯೆ. ಜ್ಞಾನ, ಶಿಸ್ತು, ಶಿಕ್ಷಣದಲ್ಲಿ ಬಹಳ ಪಾತ್ರ ವಹಿಸುತ್ತದೆ. ಕನ್ನಡ ಸಾಹಿತ್ಯ ಅನೇಕ ಅಂತಶಿಸ್ತಿಯ ವಿಷಯಗಳನ್ನು ಒಳಗೊಂಡಿದೆ.

ಧಾರವಾಡ:

ಬಹುಸಂಖ್ಯಾತರ ಜನರ ಹಿತಕ್ಕಾಗಿ ಸಾಹಿತ್ಯ ರಚಿಸುವ ಜವಾಬ್ದಾರಿ ಕನ್ನಡ ‌ಪ್ರಾಧ್ಯಾಪಕರ ಮೇಲಿದೆ. ಅವರು ಸಾಮಾಜಿಕ-ಶೈಕ್ಷಣಿಕ-ಸಾಂಸ್ಕೃತಿಕ ರಾಯಭಾರಿಗಳಾಗಬೇಕಾದ ಅವಶ್ಯಕತೆ ಇದೆ ಎಂದು ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಹೇಳಿದರು.ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ಸೋಮವಾರ ವಿವಿಧ ಕಾಲೇಜುಗಳ ಕನ್ನಡ ಪ್ರಾಧ್ಯಾಪಕರಿಗೆ ಕವಿವಿಯಲ್ಲಿ ಆಯೋಜಿಸಿದ್ದ ಎರಡು ವಾರಗಳ ''''''''ಕನ್ನಡ ಸಾಹಿತ್ಯ ಮತ್ತು ಅನ್ಯಜ್ಞಾನ ಶಿಸ್ತುಗಳು'''''''' ಕುರಿತು ಪುನಶ್ಚೇತನ ಶಿಬಿರ ಉದ್ಘಾಟಿಸಿದ ಅವರು, ಕಲಿಯುವುದು, ಕಲಿಸುವುದು ಒಂದು ನಿರಂತರ ಪ್ರಕ್ರಿಯೆ. ಜ್ಞಾನ, ಶಿಸ್ತು, ಶಿಕ್ಷಣದಲ್ಲಿ ಬಹಳ ಪಾತ್ರ ವಹಿಸುತ್ತದೆ. ಕನ್ನಡ ಸಾಹಿತ್ಯ ಅನೇಕ ಅಂತಶಿಸ್ತಿಯ ವಿಷಯಗಳನ್ನು ಒಳಗೊಂಡಿದೆ. ಶಿಕ್ಷಕನು ಕೇವಲ ನಿರ್ದಿಷ್ಟ ವಿಷಯಕ್ಕೆ ಸೀಮಿತ ಆಗದೆ ಭಿನ್ನವಾದ ಜ್ಞಾನ ಹೊಂದುವ ಅವಶ್ಯಕತೆ ಇದೆ ಎಂದರು.

ಕನ್ನಡ ಸಾಹಿತ್ಯ ಎಲ್ಲ ಜ್ಞಾನವನ್ನು ಒಳಗೊಂಡಿದೆ. ಕನ್ನಡ ಅಧ್ಯಾಪಕರು ಲೋಕ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ಅಧ್ಯಾಪಕರು ಕನ್ನಡ ಸಾಹಿತ್ಯವನ್ನು ಭಿನ್ನವಾಗಿ ನೋಡಬೇಕಾದ ಅಗತ್ಯವಿದ್ದು ಕನ್ನಡ ಸಾಹಿತ್ಯ ಎಲ್ಲ ಜ್ಞಾನ ಶಾಖೆಗಳನ್ನು ಹೊಂದಿದೆ. ಕನ್ನಡ ಸಾಹಿತ್ಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಅನೇಕ ಅಂಶಗಳನ್ನು ಒಳಗೊಂಡಿದೆ. ಅದ್ದರಿಂದ ಪ್ರಾಧ್ಯಾಪಕರು ಹೊಸ ದಿಕ್ಕಿನತ್ತ ಸಂಶೋಧನೆ ನಡೆಸುವ ಅಗತ್ಯವಿದೆ ಎಂದರು.

ಮಾಳವೀಯಾ ಮಿಷಿನ್ ಟೀಚರ್ ಟ್ರೇನಿಂಗ್ ಸೆಂಟರ್ ನಿರ್ದೇಶಕ ಡಾ. ಬಿ.ಎಚ್. ನಾಗೂರ, ಸಾಹಿತ್ಯ ಬಹುಶಿಸ್ತಿಯ ವಿಷಯ ಮತ್ತು ಜ್ಞಾನವನ್ನು ಒಳಗೊಂಡಿದೆ. ಎರಡು ವಾರಗಳ ವರೆಗೆ ಅನೇಕ ಸಂಪನ್ಮೂಲಗಳ ವ್ಯಕ್ತಿಗಳಿಂದ ಉಪನ್ಯಾಸ ಆಯೋಜಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಸಾಹಿತ್ಯ ತನ್ನದೇ ಆದ ಪ್ರಭಾವ ಬೀರಿದೆ ಎಂದು ಹೇಳಿದರು.ರಾಜ್ಯದ ವಿವಿಧ ಕಾಲೇಜುಗಳ ಕನ್ನಡ ಪ್ರಾಧ್ಯಾಪಕರು ಭಾಗವಹಿಸಿದ್ದರು. ಕಾರ್ಯಾಗಾರದ ಸಂಯೋಜಕ ಡಾ. ನಿಂಗಪ್ಪ ಹಳ್ಳಿ ಪರಿಚಯಿಸಿದರು. ಡಾ. ಅನುಸೂಯಾ ಕಾಂಬಳೆ ವಂದಿಸಿದರು. ಡಾ. ಶಿವಾನಂದ ದೊಡಮನಿ ನಿರೂಪಿಸಿದರು.