ಮಾದಿಗ ಸಮುದಾಯದ ಮುಖಂಡರ ಸಂವಾದ

ಕನ್ನಡಪ್ರಭ ವಾರ್ತೆ, ತರೀಕೆರೆ

ಕಳೆದ 40 ವರ್ಷಗಳಿಂದ ಒಳ ಮೀಸಲಾತಿ ಜಾರಿಗೊಳಿಸುವಂತೆ ಮಾಡಿದ ಹೋರಾಟ ಫಲ ಕೊಟ್ಟಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.ತರೀಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಮಾದಿಗ ಸಮುದಾಯದ ಮುಖಂಡರ ಸಂವಾದದಲ್ಲಿ

ಮಾತನಾಡಿ ಒಳ ಮೀಸಲಾತಿ ಒದಗಿಸಲು ನೇಮಿಸಿದ ಎಲ್ಲಾ ಆಯೋಗಗಳು ಮಾದಿಗ ಸಮುದಾಯದ ಪರವಾದ ಮತ್ತು ಸತ್ಯವಾದ ವರದಿಯನ್ನೇ ರಾಜ್ಯ ಸರ್ಕಾರಕ್ಕೆ ನೀಡಿವೆ. ಮಾದಿಗ ಸಮುದಾಯ ದೊಡ್ಡ ಸಮುದಾಯವಾಗಿದ್ದು, ಸೌಲಭ್ಯ ವಂಚಿತ ಸಮುದಾಯ. ಇತರೆ ಜಾತಿಗಳೊಂದಿಗೆ ಸ್ಪರ್ಧಿಸಲು ಅಶಕ್ತವಾಗಿದೆ. ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಕಾರಣದಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಕಲ್ಪಿಸಿ, ಮಾದಿಗ ಸಮುದಾಯಕ್ಕೆ ನ್ಯಾಯ ನೀಡಿದೆ ಎಂದು ತಿಳಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯದಂತೆಯೇ ಮೀಸಲಾತಿ ದೊರಕಿದೆ. ಮುಂದಿನ ಎಲ್ಲಾ ಸರ್ಕಾರಿ ನೌಕರಿಗಳು ಒಳ ಮೀಸಲಾತಿಯಡಿಯಲ್ಲಿಯೇ ಭರ್ತಿಯಾಗಲಿವೆ. ಒಳ ಮೀಸಲಾತಿಯಲ್ಲಿ ಜನಸಂಖ್ಯೆ ಮತ್ತು ಅವರ ಸ್ಥಿತಿಗತಿಗಳ ಆಧಾರದ ಮೇಲೆ ಮೀಸಲಾತಿಯ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.ಒಳ ಮೀಸಲಾತಿ ಸೌಲಭ್ಯದಡಿ ಸಮುದಾಯದ ವಿದ್ಯಾವಂತರಿಗೆ ಸೂಕ್ತ ಅವಕಾಶ ದೊರಕಲಿವೆ. ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ಜಿಲ್ಲಾವಾರು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು ಎಂಬ ಉದ್ದೇಶದೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಭೃಹತ್ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಜಿ.ತಿಪ್ಪೇಶ್, ಮಹೇಂದ್ರಸ್ವಾಮಿ, ಶಿಕ್ಷಕ ಎಚ್.ಕೆ.ಶೇಖರಪ್ಪ ಮಾತನಾಡಿದರು. ಅಣ್ಣಯ್ಯ, ಪ್ರಮೋದ್, ವೈ.ಎಸ್.ಮಂಜಪ್ಪ, ಜಿ.ಟಿ.ರಮೇಶ್, ಬಸವರಾಜು, ಮಂಜಪ್ಪ, ನಾಗೇಶ್, ರಂಗನಾಥ್, ಹರೀಶ್, ಮಂಜಪ್ಪ, ಅಶೋಕ್, ಆಂಜನೇಯ, ಎಸ್.ಕೆ.ರಂಗಪ್ಪ, ಕುಮಾರಪ್ಪ, ರಘು, ಶಿವರಾಜ್, ಗುರುಮೂರ್ತಿ ಹಾಗೂ ಇತರರು ಹಾಜರಿದ್ದರು.

--


29ಕೆಟಿಆರ್.ಕೆ.15ಃ

ತರೀಕೆರೆ ಪ್ರವಾಸಿ ಮಂದಿರದಲ್ಲಿ ನಡೆದ ಮಾದಿಗ ಸಮುದಾಯದ ಮುಖಂಡರ ಸಂವಾದದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಅವರು ಮಾತನಾಡಿದರು.