ಮಂಡ್ಯ:

ತಾಲೂಕಿನ ಹಂಪಾಪುರದಲ್ಲಿ 400 ಕೆವಿ ವಿದ್ಯುತ್ ಉಪಕೇಂದ್ರ (ಸಬ್ ಸ್ಟೇಷನ್) ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಜಿಲ್ಲೆಯ ವಿದ್ಯುತ್ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದೆ. ವಿದ್ಯುತ್ ಕೊರತೆ ಅನುಭವಿಸುತ್ತಿರುವ ರೈತರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಒದಗಿಸಲು ಸಹಕಾರಿಯಾಗಲಿದೆ ಎಂದು ಡೀಸಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಸಬ್ ಸ್ಟೇಷನ್ ಯೋಜನೆ ಅನುಷ್ಠಾನದಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗುವ ಜೊತೆಗೆ ಜಿಲ್ಲೆಯ ವಿದ್ಯುತ್ ಸರಬರಾಜಿನ ವಿಶ್ವಾಸಾರ್ಹತೆಯೂ ಹೆಚ್ಚಲಿದೆ. ಆದ್ದರಿಂದ ಸದರಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಸಹಕಾರ ಹಾಗೂ ಅನುಕೂಲಗಳನ್ನು ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಯೋಜನೆ ಅನುಷ್ಠಾನದ ವೇಳೆ ಭೂಮಿ ಅಥವಾ ಬೆಳೆಗಳಿಗೆ ಹಾನಿಯಾದಲ್ಲಿ, ಸರ್ಕಾರದ ನಿಯಮಾನುಸಾರ ಸಂಬಂಧಪಟ್ಟ ರೈತರಿಗೆ ಭೂ ಪರಿಹಾರ ಹಾಗೂ ಬೆಳೆ ನಷ್ಟ ಪರಿಹಾರವನ್ನು ಒದಗಿಸಲಾಗುವುದು ಎಂದರು.

ಕೆಪಿಟಿಸಿಎಲ್ ಹೆಸರಿನಲ್ಲಿರುವ 400 ಕೆವಿ ಉಪಕೇಂದ್ರದ ಜಾಗದ ಹದ್ದುಬಸ್ತು (ಸರ್ವೇ ಹಾಗೂ ಗಡಿ ಗುರುತಿಸುವಿಕೆ) ಪ್ರಕ್ರಿಯೆ ಶೀಘ್ರ ಮುಗಿಸಲು ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಸೂಚಿಸಿದರು. ಕಾಮಗಾರಿಯನ್ನು ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಯಾವುದೇ ವಿಳಂಬವಿಲ್ಲದೆ ಶೀಘ್ರ ಪೂರ್ಣಗೊಳಿಸಲು ತಾಕೀತು ಮಾಡಿದರು.


ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮಂಡ್ಯ, ಭೂ ದಾಖಲೆಗಳ ಉಪನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಯೋಜನೆ/ಕಾರ್ಯಾಚರಣೆ), ಮಂಡ್ಯ, ಹಂಪಾಪುರ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಅಧಿಕಾರಿಗಳು, ಜಿಲ್ಲೆಯ ತಹಸಿಲ್ದಾರರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಎಸ್‌ಐಆರ್ ಹಿನ್ನೆಲೆ ಡೀಸಿಯಿಂದ ನಗರದ ವಿವಿಧೆಡೆ ಸ್ಥಳಗಳ ಪರಿಶೀಲನೆ

ಮಂಡ್ಯ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಕುವೆಂಪು ನಗರ ಹಾಗೂ ಗಾಂಧಿನಗರ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಪರಿಶೀಲನೆ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ, ಮನೆ-ಮನೆ ಸಮೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ಕ್ಷೇತ್ರ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಕೈಗೊಂಡಿರುವ ಕಾರ್ಯಗಳ ಪ್ರಗತಿ ಅವಲೋಕಿಸಿ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಕಾರ್ಯವನ್ನು ಪಾರದರ್ಶಕ, ನಿಖರವಾಗಿ ಮತ್ತು ನಿಗದಿತ ವೇಳಾಪಟ್ಟಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಸಿದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಈ ವೇಳೆ ಉಪ ವಿಭಾಗಾಧಿಕಾರಿ ಶಿವಮೂರ್ತಿ, ನಗರಸಭೆ ಆಯುಕ್ತರಾದ ಪಂಪಾಶ್ರೀ ಇತರರು ಇದ್ದರು.