ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವ

| Published : Jun 16 2024, 01:50 AM IST

ಸಾರಾಂಶ

ಕೊಣಾಜೆಯ ಮಂಗಳಾ ಸಭಾಂಗಣದಲ್ಲಿ ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವ ನಡೆಯಿತು. ಘಟಿಕೋತ್ಸವದಲ್ಲಿ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಪದವಿ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶಾದ್ಯಂತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇದನ್ನು ನೀಗಿಸಲು ಕೌಶಲ್ಯಾಧಾರಿತ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ, ಮಂಗಳೂರು ವಿವಿ ಸಹ ಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.

ಕೊಣಾಜೆಯ ಮಂಗಳಾ ಸಭಾಂಗಣದಲ್ಲಿ ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2024ರ ಏಪ್ರಿಲ್‌ ವೇಳೆಗೆ ದೇಶದ ಗ್ರಾಮಾಂತರ ಪ್ರದೇಶದಲ್ಲಿ ಶೇ.7.8ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ.8.7ರಷ್ಟು ನಿರುದ್ಯೋಗವಿತ್ತು. 20ರಿಂದ 24 ವರ್ಷ ವಯೋಮಾನದ ಯುವಕರಲ್ಲಿ ಶೇ.44ರಷ್ಟು ನಿರುದ್ಯೋಗ ಸಮಸ್ಯೆ ಇದ್ದರೆ, 25ರಿಂದ 29 ವಯೋಮಾನದವರಲ್ಲಿ ಶೇ.14ರಷ್ಟಿದೆ. ಐಟಿ ವಲಯದಲ್ಲಿ ಉದ್ಯೋಗವಕಾಶ ಕಡಿಮೆಯಾಗುತ್ತಿದ್ದು, ಕಳೆದ ವರ್ಷ ಶೇ.5ರಷ್ಟು ಇಳಿಕೆಯಾಗಿದೆ. ಉದ್ಯೋಗ ಸಿಗಬೇಕಾದರೆ ಅನುಭವದ ನಿರೀಕ್ಷೆ ಹೆಚ್ಚುತ್ತಿದ್ದು, ಅದಕ್ಕಾಗಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಜ್ಜೆಯಿಟ್ಟಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸಲು ಇಂಟರ್ನ್‌ಶಿಪ್‌ ಆಧಾರಿತ ಕೋರ್ಸ್‌ಗಳು, ತಾಂತ್ರಿಕ ಶಿಕ್ಷಣದಲ್ಲೂ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಕೌಶಲ್ಯಾಧಾರಿತ ಡಿಗ್ರಿ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದ್ದು, ಹಲವು ಒಪ್ಪಂದಗಳನ್ನು ರೂಪಿಸಲಾಗುತ್ತಿದೆ ಎಂದು ಡಾ.ಎಂ.ಸಿ. ಸುಧಾಕರ್‌ ತಿಳಿಸಿದರು.

ಪ್ರಸ್ತುತ ಹಲವು ಸಮಸ್ಯೆಗಳನ್ನು ವಿಶ್ವವಿದ್ಯಾನಿಲಯಗಳು ಎದುರಿಸುತ್ತಿವೆ. ಹೆಚ್ಚೆಚ್ಚು ವಿವಿಗಳ ಸ್ಥಾಪನೆ ಒಂದೆಡೆಯಾದರೆ, ವಿವಿಗಳ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ. ಇದರಿಂದ ಶೈಕ್ಷಣಿಕ ವ್ಯವಸ್ಥೆ ಹದಗೆಡದಂತೆ ಸರಿದೂಗಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.

1994ರಲ್ಲಿ ನಾನು ಕೂಡ ಮಂಗಳೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದೆ. ಇಂದು ಇದೇ ವಿವಿಗೆ ಸಹಕುಲಾಧಿಪತಿಯಾಗಿ ಭಾಗವಹಿಸುವ ಅವಕಾಶ ಲಭಿಸಿದೆ. ಮಂಗಳೂರು ವಿವಿ ವಿದ್ಯಾರ್ಥಿಯಾಗಿದ್ದ ಅವಧಿ ನನ್ನ ಜೀವನದ ಮಹತ್ತರ ಘಟ್ಟವಾಗಿತ್ತು. ನನ್ನ ಜೀವನದ ಮಹತ್ವದ ತಿರುವು ಇಲ್ಲಿಂದಲೇ ಆಗಿದೆ ಎಂದು ಡಾ.ಸುಧಾಕರ್‌ ಸ್ಮರಿಸಿದರು.

ಮುಖ್ಯ ಅತಿಥಿ, ದೆಹಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಮಹಾ ನಿರ್ದೇಶಕ ಪ್ರೊ. ಸಚಿನ್‌ ಚತುರ್ವೇದಿ ಘಟಿಕೋತ್ಸವ ಭಾಷಣ ಮಾಡಿದರು. ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾನಿಲಯಗಳ ನಡುವೆ ಒಂದು ರೀತಿಯ ಅಂತರವಿದೆ. ಈ ಅಂತರವನ್ನು ಸರಿದೂಗಿಸಿದರೆ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.

ಪದವಿ ಪ್ರದಾನ:

ಘಟಿಕೋತ್ಸವದಲ್ಲಿ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಪದವಿ ಪ್ರದಾನ ಮಾಡಿದರು. ಒಟ್ಟು 168 ರಾಂಕ್‌ಗಳಲ್ಲಿ ಪ್ರಥಮ ರಾಂಕ್‌ ಪಡೆದ 72 ಮಂದಿಗೆ ರಾಂಕ್‌ ಪ್ರಮಾಣ ಪತ್ರ ನೀಡಲಾಯಿತು. 155 ಮಂದಿಗೆ ಪಿಎಚ್‌.ಡಿ ಪದವಿ (ಕಲೆ -51, ವಿಜ್ಞಾನ -73, ವಾಣಿಜ್ಯ 26, ಶಿಕ್ಷಣ -05) ಪ್ರದಾನ ಮಾಡಲಾಯಿತು.ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್‌. ಧರ್ಮ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವವಿದ್ಯಾನಿಲಯದ ಸಾಧನೆಯ ವಿವರ ನೀಡಿದರು. ವಿವಿ ರಿಜಿಸ್ಟ್ರಾರ್‌ ಕೆ.ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್‌. ದೇವೇಂದ್ರಪ್ಪ ಇದ್ದರು.ಬಾಕ್ಸ್‌

ಮೂವರು ಉದ್ಯಮಿಗಳಿಗೆ ಗೌ.ಡಾ. ಪ್ರದಾನ

ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಉದ್ಯಮಿಗಳಾದ ಡಾ.ರೊನಾಲ್ಡ್‌ ಕೊಲಾಸೋ, ಎಂ.ಆರ್‌.ಜಿ. ಗ್ರೂಪ್‌ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್‌ ಶೆಟ್ಟಿ ಹಾಗೂ ತುಂಬೆ ಗ್ರೂಪ್‌ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದೀನ್‌ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಡಾ.ತುಂಬೆ ಮೊಯ್ದೀನ್‌ ಗೈರುಹಾಜರಾಗಿದ್ದರು.ಅಂಧತ್ವ ಮೀರಿ ಫಸ್ಟ್‌ ರ್‍ಯಾಂಕ್‌ ಪಡೆದ ಆಧೀಶ್‌!ಮಂಗಳೂರು: ಸಂಪೂರ್ಣ ಅಂಧ ವಿದ್ಯಾರ್ಥಿಯೊಬ್ಬರು ಪ್ರಥಮ ರ್‍ಯಾಂಕ್‌ ಗಳಿಸಿ ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆಧೀಶ್‌ ಉಚ್ಚಿಲ ಅವರು ಬಿಎಎಚ್‌ಆರ್‌ಡಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಚಾರದಲ್ಲಿ ಪ್ರಥಮ ರ್‍ಯಾಂಕ್‌ ಪಡೆದು ಮಾದರಿಯಾಗಿದ್ದಾರೆ. ಉಚ್ಚಿಲ ನಿವಾಸಿಗಳಾದ ಎಂಆರ್‌ಪಿಎಲ್‌ ಉದ್ಯೋಗಿ ಸುಧೀರ್‌ ಹಾಗೂ ಗುಣಶ್ರೀ ಅವರ ಏಕೈಕ ಪುತ್ರ ಇವರು. ಹತ್ತನೇ ತರಗತಿಯಲ್ಲಿದ್ದಾಗ ಕಣ್ಣಿನ ರೆಟಿನಾ ಸಮಸ್ಯೆಯಿಂದ ದೃಷ್ಟಿ ಮಂದವಾಗತೊಡಗಿತ್ತು. ದ್ವಿತೀಯ ಪಿಯುಸಿ ಅವಧಿಯಲ್ಲಿ ಸಂಪೂರ್ಣ ದೃಷ್ಟಿ ಹೋಗಿ ಅಂಧರಾದರು. ವಿಧಿಯಾಟ ತನ್ನ ಪಾಲಿಗೆ ಕ್ರೂರವಾಗಿದ್ದರೂ ಧೃತಿಗೆಡದ ಆಧೀಶ್‌ ಓದಿನತ್ತ ಗಮನ ಕೇಂದ್ರೀಕರಿಸಿ ಇದೀಗ ಮೊದಲ ರ್‍ಯಾಂಕ್‌ ತನ್ನದಾಗಿಸಿಕೊಂಡಿದ್ದಾರೆ. ಮುಂದೆ ಎಂಬಿಎ ಬರೆಯಲು ಸಿಎಟಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಬೆಂಗಳೂರಿನ ನೋಬಲ್‌ ಇಂಡಿಯಾ ಎನ್‌ಜಿಒನಲ್ಲಿ ತರಬೇತಿ ಪಡೆಯಲು ನಿರ್ಧರಿಸಿದ್ದಾಗಿ ಹೇಳಿಕೊಂಡರು.--------ಬಿಸಿಯೂಟ ಸಹಾಯಕಿ ಪುತ್ರಿ ಫಸ್ಟ್‌ ರ್‍ಯಾಂಕ್‌!ಮಂಗಳೂರು: ತಾಯಿ ಬಿಸಿಯೂಟ ಸಹಾಯಕಿ, ತಂದೆಗೆ ಸೊಸೈಟಿಯಲ್ಲಿ ಕೆಲಸ. ಇವರ ಪುತ್ರಿ ಸೌಜನ್ಯಗೆ ಕನ್ನಡ ಎಂಎಯಲ್ಲಿ ಪ್ರಥಮ ರ್‍ಯಾಂಕ್‌! ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯಾಗಿರುವ ಈಕೆ ಈ ಬಾರಿಯ ಘಟಿಕೋತ್ಸವದಲ್ಲಿ ಒಂದು ಚಿನ್ನದ ಪದಕ ಹಾಗೂ ಆರು ನಗದು ಬಹುಮಾನ ಪಡೆದುಕೊಂಡು ಭೇಷ್‌ ಎನಿಸಿಕೊಂಡಿದ್ದಾರೆ. ತಂದೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಬಾಬು ಮತ್ತು ತಾಯಿ- ಕೆಯ್ಯೂರು ಕೆಪಿಎಸ್‌ನ ಬಿಸಿಯೂಟದ ಸಹಾಯಕಿ ಸುಂದರಿ. ಸೌಜನ್ಯಾಗೆ ಶಿಕ್ಷಕಿಯಾಗುವ ಕನಸು. ಈಗಾಗಲೇ ಬಿಎಡ್‌ನ ಮೊದಲ ವರ್ಷದ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.67ನೇ ವಯಸ್ಸಲ್ಲೂ ಫಸ್ಟ್‌ ರ್‍ಯಾಂಕ್‌!ಮಂಗಳೂರು: ನಿವೃತ್ತಿ ವಯಸ್ಸು ದಾಟಿ, 67 ವರ್ಷ ಆದರೂ ಓದಿನ ಆಸಕ್ತಿ ಕಳೆದುಕೊಳ್ಳದ ಮೋಹನ್‌ ಪೈಲೂರು ಈ ಬಾರಿ ಪಿಜಿ ಡಿಪ್ಲೋಮಾ ಇನ್‌ ಯೋಗ ವಿಜ್ಞಾನದಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಸುಳ್ಯ ಚೊಕ್ಕಾಡಿ ಸಮೀಪದ ಪೈಲೂರಿನ ಮೋಹನ್‌ ಅವರು ಎಂಜಿನಿಯರ್‌ ಆದರೆ ವೃತ್ತಿ ಮುಗಿಸಿ ನಿವೃತ್ತರಾಗಿದ್ದರು. ಅದರ ಬಳಿಕ ಯೋಗದಲ್ಲಿ ಆಸಕ್ತಿ ಮೂಡಿತು. ಹಾಗಾಗಿ ಪಿಜಿ ಡಿಪ್ಲೊಮಾ ಕೋರ್ಸ್‌ ಸೇರಿದರು. ಆದರೆ ಇವರು ಕೋರ್ಸ್‌ ಮುಗಿಸಿದ್ದು 2022ರಲ್ಲಿ, ಈ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ನೀಡಲಾಗಿದೆ. ಯೋಗ ಕಲಿಯಲು ಬಂದವರಿಗೆ ಕಲಿಸುವ ಕೆಲಸ ಮಾಡುತ್ತೇನೆ ಎನ್ನುತ್ತಾರೆ.