ರಾಮನಗರ: ಆಹಾರ ಸೇವಿಸಿ 8 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಬಸವನಪುರದ ಪರಿಶಿಷ್ಟ ಪಂಗಡದ ಆಶ್ರಮ ಶಾಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ವಸತಿ ಶಾಲೆಯಲ್ಲಿ 27 ವಿದ್ಯಾರ್ಥಿಗಳಿದ್ದು, ರಾತ್ರಿ ಎಲ್ಲರು ಸೊಪ್ಪಿನ ಸಾರು, ಅನ್ನು ಊಟ ಸೇವಿಸಿದ್ದರು. ಇವರಲ್ಲಿ 6 ಹೆಣ್ಣು ಮತ್ತು 2 ಗಂಡು ಮಕ್ಕಳಿಗೆ ಎದೆ, ಹೊಟ್ಟೆನೋವು ಕಾಣಿಸಿಕೊಂಡು ನರಳಾಡಿದ್ದಾರೆ. ಕೂಡಲೇ ವಾರ್ಡನ್ ಮಹದೇವಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಮಕ್ಕಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪ್ರಾಥಮಿಕ ಚಿಕಿತ್ಸೆಯಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಯಾರಿಗೂ ಪ್ರಾಣಾಪಾಯವಿಲ್ಲ. ಮಕ್ಕಳನ್ನು ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡು ಬೆಳಗ್ಗೆ ಬಿಡುಗಡೆ ಮಾಡಿದ್ದಾರೆನ್ನಲಾಗಿದೆ.ಈ ಘಟನೆ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು ಆತಂಕದಲ್ಲಿ ಜಿಲ್ಲಾಸ್ಪತ್ರೆಗೆ ಧಾವಿಸಿದರು. ವಸತಿ ಶಾಲೆಯ ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡುತ್ತಿಲ್ಲ. ಶುಚಿಗೊಳಿಸದ ಅಕ್ಕಿಯನ್ನು ಬಳಸಿ ಊಟ ತಯಾರು ಮಾಡುತ್ತಾರೆ. ಈ ಬಗ್ಗೆ ದೂರು ಹೇಳಿದರೆ ವಿದ್ಯಾರ್ಥಿಗಳನ್ನು ಹೆದರಿಸುತ್ತಾರೆ ಎಂದು ಪೋಷಕರು ವಸತಿ ನಿಲಯದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯಕೀಯ ವರದಿ ಬಂದಿದ್ದು, ಮಕ್ಕಳು ಸೇವಿಸಿದ ಆಹಾರ ಕಲುಷಿತಗೊಂಡಿಲ್ಲ. ಅಸ್ವತ್ಥಗೊಳ್ಳಲು ಬೇರೆ ಇರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.10ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿರುವುದು.