ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಫಲಾನುಭವಿಗಳಿಗೆ 94 ಸಿ, 94 ಸಿಸಿ ಹಕ್ಕುಪತ್ರ ವಿತರಣೆ

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಫಲಾನುಭವಿಗಳಿಗೆ 94 ಸಿ, 94 ಸಿಸಿ ಹಕ್ಕುಪತ್ರ ವಿತರಣೆ ಬೆಳ್ತಂಗಡಿ: ರಾಜ್ಯಕ್ಕೆ ಮಾದರಿಯಾದ ಗ್ರಾಮಮಟ್ಟದ ಜನಸ್ಪಂದನ ಕಾರ್ಯಕ್ರಮದ ಮೂಲಕ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿಯಲಾಗಿದ್ದು ಸೂಕ್ತ ಸ್ಪಂದನೆ ನೀಡುವ ಮೂಲಕ ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಶನಿವಾರ ತಾಲೂಕು ಆಡಳಿತ ಸೌಧದಲ್ಲಿ 94 ಸಿ ಹಾಗೂ 94 ಸಿಸಿ ಹಕ್ಕುಪತ್ರ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.

32 ಇಲಾಖೆಗಳ ಅಧಿಕಾರಿಗಳ ಮೂಲಕ ನಡೆದ ಜನಸ್ಪಂದನ ಕಾರ್ಯಕ್ರಮದ ಫಲಶ್ರುತಿ ಇದಾಗಿದ್ದು ಹಕ್ಕು ಪತ್ರ ಪಡೆಯಲು ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ತಾಲೂಕು ಆಡಳಿತವನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಅವರ ಕೆಲಸವನ್ನು ತ್ವರಿತವಾಗಿ ಮಾಡಿಕೊಟ್ಟು ಕಚೇರಿ ಅಲೆದಾಟವನ್ನು ತಪ್ಪಿಸಲಾಗಿದೆ ಎಂದರು. ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಜೈನ್ ಎಳನೀರು ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ಅನಿತಾ ಕೆ., ಉಪ ತಹಸೀಲ್ದಾರ್ ಜಯಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಮ ಆಡಳಿತಾಧಿಕಾರಿ ಹೇಮಾ ಕಾರ್ಯಕ್ರಮ ನಿರೂಪಿಸಿದರು.

ಶಾಸಕರಿಂದ ಕಡತ ಪರಿಶೀಲನೆ

94 ಸಿ, 94 ಸಿಸಿ ಹಕ್ಕು ಪತ್ರ ನೀಡಲು ಬಾಕಿಯಾಗಿರುವ ಕಡತಗಳ ವಿಲೇವಾರಿ ಕುರಿತು ಶಾಸಕರು ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರದ ತಹಸೀಲ್ದಾರ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ತಕ್ಷಣ ವಿಲೇವಾರಿ ಮಾಡುವಂತೆ ಸೂಚಿಸಿದರು. ಕಡತ ವಿಲೇವಾರಿ ವಿಳಂಬ ಕುರಿತು ಶಾಸಕರು ಪ್ರಶ್ನಿಸಿದಾಗ ಅಧಿಕಾರಿಗಳು ತಬ್ಬಿಬ್ಬಾದ ಘಟನೆಯು ನಡೆಯಿತು. ನಡಾವಳಿ ಪಡೆದ ನಾಲ್ಕು ಮಂದಿ ಕಟ್ಟಬೇಕಾದ ಶುಲ್ಕವನ್ನು ಶಾಸಕರು ಪಾವತಿಸುವುದಾಗಿ ತಿಳಿಸಿದರು. 108 ಮಂದಿಗೆ 94 ಸಿ ಹಾಗೂ 94 ಸಿಸಿ ಮತ್ತು 54 ಮಂದಿಗೆ ನಡಾವಳಿ ವಿತರಿಸಲಾಯಿತು.ಹಂತ ಹಂತಗಳಲ್ಲಿ ಸಮಸ್ಯೆ ಪರಿಹಾರ

ಶಾಸಕರು ತಾಲೂಕಿನ 81 ಗ್ರಾಮಗಳ 48 ಗ್ರಾಮ ಪಂಚಾಯಿತಿ ಹಾಗೂ ಬೆಳ್ತಂಗಡಿ ನಗರ ಪಂಚಾಯಿತಿ ಮಟ್ಟದಲ್ಲಿ ಕಳೆದ ಮೂರು ತಿಂಗಳಿನಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಹಕ್ಕು ಪತ್ರ, ವನ್ಯಜೀವಿಗಳ ಹಾವಳಿ, ರಸ್ತೆ ಸಮಸ್ಯೆ, ಸ್ಮಶಾನ ಕೊರತೆ, ತ್ಯಾಜ್ಯ ಘಟಕ, ವಿದ್ಯುತ್ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಹವಾಲು ತೋಡಿಕೊಂಡಿದ್ದರು. ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕರು ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುತ್ತಿದ್ದು ಪ್ರತಿ 15 ದಿನಗಳಿಗೊಮ್ಮೆ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುವ ಕ್ರಮವನ್ನು ಕೈಗೊಂಡಿದ್ದಾರೆ.