ಕನ್ನಡಪ್ರಭ ವಾರ್ತೆ ಬೆಂಗಳೂರು
ಡ್ರಗ್ಸ್ ಮಾಫಿಯಾ ವಿರುದ್ಧ ರಾಜಧಾನಿ ಪೊಲೀಸರು ಹಾಗೂ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ಮತ್ತೆ ನಗರದಲ್ಲಿ ಐವರು ಪೆಡ್ಲರ್‌ಗಳನ್ನು ಸೆರೆ ಹಿಡಿದು 5.73 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಕಳ್ಳ ಮಾರ್ಗದಲ್ಲಿ ನಾಡಿಗೆ ಸಾಗಾಣಿಕೆಗೆ ಯತ್ನಿಸಿದ್ದ 5.25 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕೆಐಎಗೆ ಮಾ.6 ರಂದು ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕನನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಆತನ ಬ್ಯಾಗ್ ಪರಿಶೀಲಿಸಿದಾಗ 3.83 ಕೋಟಿ ರು. ಮೌಲ್ಯದ 10.94 ಕೆಜಿ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಅದೇ ರೀತಿ ಮಾ.8 ರಂದು ಬ್ಯಾಂಕಾಕ್‌ನಿಂದ ಬಂದ ಮತ್ತೊಬ್ಬನ ಬ್ಯಾಗ್‌ನಲ್ಲಿ 59.5 ಲಕ್ಷ ರು. 1.7 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.ಟೈಲರ್ ಬಳಿ 20 ಲಕ್ಷ ಗಾಂಜಾ!
ಮಹದೇವಪುರ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಟೈಲರ್‌ವೊಬ್ಬ ಸಿಕ್ಕಿಬಿದ್ದಿದ್ದಾನೆ.
ರಾಮಮೂರ್ತಿ ನಗರದ ವಿಜಿನಾಪುರದ ನಿವಾಸಿ ಖುರ್ಷಿದ್ ಅಲಾಂ ಬಂಧಿತನಾಗಿದ್ದು, ಆರೋಪಿಯಿಂದ 20 ಲಕ್ಷ ರು. ಮೌಲ್ಯದ 19 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಮಹದೇವಪುರ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.
ಖುರ್ಷಿದ್ ಮೂಲತಃ ಪಶ್ಚಿಮ ಬಂಗಾಳ ರಾಜ್ಯದವನಾಗಿದ್ದು, ಮೂರು ವರ್ಷಗಳಿಂದ ನಗರದಲ್ಲಿ ಆತ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ. ಹಣದಾಸೆಯಿಂದ ಗಾಂಜಾ ದಂಧೆಗಿಳಿದಿದ್ದ ಆರೋಪಿ, ತನ್ನೂರಿನಲ್ಲಿ ಕಡಿಮೆ ಬೆಲೆಗೆ ಸಿಗುವ ಗಾಂಜಾವನ್ನು ನಗರಕ್ಕೆ ತಂದು ದುಬಾರಿ ಬೆಲೆಗೆ ಮಾರುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೆ.ಜಿ. ಹಳ್ಳಿ ಠಾಣೆ ಪೊಲೀಸರ ಗಾಳಕ್ಕೆ ಬಿದ್ದಿದ್ದಾನೆ. ಕೆ.ಜಿ. ಹಳ್ಳಿಯ ಆಯಾಜ್ ಖಾನ್ ಬಂಧಿತನಾಗಿದ್ದು, ಆತನಿಂದ 16.24 ಲಕ್ಷ ರು. ಮೌಲ್ಯದ ಗಾಂಜಾ ಜಪ್ತಿಯಾಗಿದೆ. ಮಲ್ಲೇಶ್ವರ ಪೊಲೀಸರು ಮತ್ತೊಬ್ಬನನ್ನು ಸೆರೆ ಹಿಡಿದು 12 ಲಕ್ಷ ರು. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
