ಜ.22 ರಿಂದ ವಿಶೇಷ ಅಧಿವೇಶನ ಕರೆದು ಚರ್ಚಿಸಿ ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸಿ ಮತ್ತೆ ಹಳೆಯ ನರೇಗಾ ಯೋಜನೆ ತರುವಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ‌.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜ.22 ರಿಂದ ವಿಶೇಷ ಅಧಿವೇಶನ ಕರೆದು ಚರ್ಚಿಸಿ ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸಿ ಮತ್ತೆ ಹಳೆಯ ನರೇಗಾ ಯೋಜನೆ ತರುವಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ‌.ಪಾಟೀಲ ಹೇಳಿದರು.ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸಿ ಜನಾಂದೋಲನ ನಡೆಸಲಾಗುವುದು. ಸ್ಥಳೀಯವಾಗಿ ಗ್ರಾಮ ಪಂಚಾಯತಿಗಳಿಗೆ ಅನ್ಯಾಯ ಮಾಡುವ ಮೂಲಕ ಜಾರಿ ಮಾಡಿರುವ ಈ ಯೋಜನೆ ಜನವಿರೋಧಿ ಯೋಜನೆಯಾಗಿದೆ. ಇದನ್ನು ವಿರೋಧಿಸಿ ಈಗಾಗಲೇ ಪಂಜಾಬ, ತೆಲಂಗಾಣ ಸರ್ಕಾರಗಳು ವಿರೋಧಿಸಿವೆ ಎಂದರು.

ಮೋದಿ ನೇತೃತ್ವದ ಸರ್ಕಾರ ಹಂತ, ಹಂತವಾಗಿ ಈ ಯೋಜನೆಯನ್ನು ಕೊಲ್ಲುವ ಕೆಲಸ ಮಾಡುತ್ತಿದೆ. ಕಳೆದ 20 ವರ್ಷಗಳಿಂದ ಜಾರಿಯಲ್ಲಿದ್ದ ನರೇಗಾ ಯೋಜನೆಯನ್ನು ಬದಲಾವಣೆ ಮಾಡುವ ಮೂಲಕ ನರೇಂದ್ರ ಮೋದಿ ಸರ್ಕಾರ ಈ ದೇಶದ ಬಡವರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡಿದೆ ಎಂದು ಕಿಡಿಕಾರಿದರು.ಮೋದಿ ಸರ್ಕಾರ ಸ್ವಾತಂತ್ರ ನಂತರದ ಈ ಮಹತ್ತರವಾದ ಯೋಜನೆಯನ್ನು ಬದಲಾಯಿಸಿದೆ. ಬಿಜೆಪಿಯವರು ಹಾಗೂ ಮೋದಿಯವರು ಸೇರಿ ಈ ಯೋಜನೆಯನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ. ಅದಕ್ಕಾಗಿ ಕೇವಲ 72 ತಾಸಿನಲ್ಲಿ ಹೊಸದಾದ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ದೂರಿದರು. ನರೇಗಾ ಯೋಜನೆಯನ್ನು ತೆಗೆದು ವಿಬಿ ಜಿ ರಾಮ್ ಜಿ ಎಂಬ ಯೋಜನೆಯನ್ನು ರಿಪ್ಲೇಸ್ ಮಾಡಿದ್ದಾರೆ. ರಾಷ್ಟ್ರಾದ್ಯಂತ ಇದ್ದ ನರೇಗಾ ಯೋಜನೆಯೂ ಮೋದಿ ಅವರ ಕಾಯ್ದೆಯು ಕೆಲವೇ ಕೆಲವು ಆಯ್ದ ಗ್ರಾಮ ಪಂಚಾಯತಿಗಳನ್ನು ಮಾತ್ರ ಆಯ್ಕೆ ಮಾಡಿದ್ದಾರೆ. ಯಾವುದೋ ಒಂದು ಜಿಲ್ಲೆ, ತಾಲೂಕು, ಪಂಚಾಯತಿಯನ್ನು ಇವರು ಯೋಜನೆ ವ್ಯಾಪ್ತಿಗೆ ತೆಗದುಕೊಳ್ಳಬಹುದು, ಬಿಡಬಹುದು ಎಂಬಂತೆ ಮಾಡಿದ್ದಾರೆ. ಪ್ರಮುಖವಾಗಿ 100 ದಿನಗಳ ದುಡಿಯುವ ಕೆಲಸದ ಸಂವಿಧಾನಿಕ ಹಕ್ಕನ್ನು ಕಸಿದುಕೊಂಡಿದ್ದಾರೆ. 100ಕ್ಕೆ 100ರಷ್ಟು ಕೂಲಿಯನ್ನು ಕೇಂದ್ರವೇ ಭರಿಸುತ್ತಿದ್ದ ಖರ್ಚನ್ನು 60:40 ಮಾಡಿ ಎಲ್ಲ ರಾಜ್ಯ ಸರ್ಕಾರಗಳಿಗೆ ಭಾರ ಮಾಡಿದ್ದಾರೆ. 100 ದಿನದ ಕೆಲಸವನ್ನು 125 ದಿನಕ್ಕೆ ಏರಿಸಿದ್ದು, ಅದರಲ್ಲಿ ಎರಡು ತಿಂಗಳು ಕೃಷಿ ಚಟುವಟಿಕೆ ಇದ್ದಾಗಲೇ ಕೆಲಸ ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ನರೇಗಾದೊಂದಿಗೆ ಗ್ರಾಮ ಪಂಚಾಯತಿಗಳು ನಡೆದಿದ್ದವು, ಇದೀಗ ನರೇಗಾ ತೆಗೆದುಬಿಟ್ಟರೇ ಗ್ರಾಮ ಪಂಚಾಯತಿಗಳು ಅವನತಿಗೆ ಸರಿಯುತ್ತವೆ. ಮಹಾತ್ಮಾಗಾಂಧಿ ರೋಜಗಾರ ಯೋಜನೆಯು ಗ್ರಾಮೀಣ ಭಾಗದ ಅಭಿವೃದ್ಧಿಗೆ ಅನುಕೂಲವಾಗಿತ್ತು. ಇದರಲ್ಲಿ ಬಡವರು, ಹಿಂದುಳಿದವರು ಎಲ್ಲರೂ ಕೆಲಸ ಮಾಡಲು ಅವಕಾಶ ಕೊಟ್ಟು, 100 ದಿನಗಳ ಉದ್ಯೋಗ ಖಾತ್ರಿ ಕೊಡಲಾಗಿತ್ತು. ಗ್ರಾಮ‌ ಪಂಚಾಯತಿಗಳಿಂದ ರಸ್ತೆ, ಶಾಲೆ, ಅಂಗನವಾಡಿ, ಚರಂಡಿ, ಕೆರೆ, ಬಾಂದಾರ ಸೇರಿದಂತೆ ಅನೇಕ ಯೋಜನೆಗಳನ್ನು ಸೇರಿಸಿ ಬಡವರಿಗೆ ಕೆಲಸ ಕೊಡುವ ಮೂಲಕ ಗುಳೆ ಹೋಗುವುದನ್ನು ತೆಡೆಯಲು ಅನುಕೂಲವಾಗಿತ್ತು ಎಂದರು.ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಶಾಸಕ ವಿಠ್ಠಲ‌ ಕಟಕದೊಂಡ, ಮುಖಂಡರಾದ ಅಬ್ದುಲ ಹಮೀದ್ ಮುಶ್ರೀಫ್, ಜಮೀರ ಅಹಮ್ಮದ ಬಕ್ಷಿ, ಡಾ.ಬಾಬುರಾಜೇಂದ್ರ ನಾಯಿಕ, ಡಾ.ಪ್ರಭುಗೌಡ ಲಿಂಗದಳ್ಳಿ, ಮಹಾದೇವಿ ಗೋಕಾಕ, ವೈಜನಾಥ ಕರ್ಪೂರಮಠ, ಮಹಮ್ಮದ ರಫೀಕ್ ಟಪಾಲ, ಕನ್ನಾನ ಮುಶ್ರೀಫ್ ಇದ್ದರು. ಜಿಲ್ಲಾಮಟ್ಟದಲ್ಲಿ ಕೇಂದ್ರದ ವಿರುದ್ಧ ಆಂದೋಲನಕ್ಕೆ ನಿರ್ಧಾರ:

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಉಳಿಸಲು ಆಗ್ರಹಿಸಿ ನಡೆಸುವ ಆಂದೋಲನ ಕುರಿತು ನಗರದಲ್ಲಿ ಸಭೆ ನಡೆಸಲಾಯಿತು. ನಗರದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹಾಗೂ ಪದಾಧಿಕಾರಿಗಳು‌ ಭಾಗಿಯಾಗಿದ್ದರು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹೆಸರು ಬದಲಾವಣೆ ವಿಚಾರಕ್ಕೆ ವಿರೋಧಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಸಭೆ ನಡೆಸಲಾಯಿತು. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಉಳಿಸಲು ಆಗ್ರಹಿಸಲಾಯಿತು. ಸಭೆಯಲ್ಲಿ ಕೇಂದ್ರದ ವಿರುದ್ಧ ಆಂದೋಲನ ನಡೆಸೋಕೆ ನಿರ್ಧಾರಿಸಲಾಯಿತು.‌ ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸಿ, ಜಿಲ್ಲಾ ಮಟ್ಟದಲ್ಲಿ ಕೇಂದ್ರದ ವಿರುದ್ಧ ಆಂದೋಲನ ನಡೆಸೋಕೆ ನಿರ್ಧರಿಸಲಾಯಿತು.ರಾಜ್ಯದಲ್ಲಿ ಜಿಪಂ, ತಾಪಂ ಚುನಾವಣೆಗಳನ್ನು ಜೂನ್-ಜುಲೈನಲ್ಲಿ ನಡೆಸಲಾಗುವುದು.

-ಎಂ.ಬಿ‌.ಪಾಟೀಲ,

ಜಿಲ್ಲಾ ಉಸ್ತುವಾರಿ ಸಚಿವರು.