ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು

| Published : Dec 22 2024, 01:30 AM IST

ಸಾರಾಂಶ

ತೋಟದಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಕ್ಕೆ ಬಾಲಕನೋರ್ವ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಸಮೀಪದ ಯಲ್ಲದಬಾಗಿಯಲ್ಲಿ ಶುಕ್ರವಾರ ನಡೆದಿದೆ.

ತುರುವೇಕೆರೆ: ತೋಟದಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಕ್ಕೆ ಬಾಲಕನೋರ್ವ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಸಮೀಪದ ಯಲ್ಲದಬಾಗಿಯಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಯಲ್ಲದಬಾಗಿ ನಿವಾಸಿ ಸುರೇಶ್ ಪುತ್ರ ಕುಶ (೬) ಮೃತ ದುರ್ದೈವಿ. ಶುಕ್ರವಾರ ಸಾಯಂಕಾಲ ತಮ್ಮ ತೋಟಕ್ಕೆ ಬಂದಿದ್ದ ಲಾರಿಯಿಂದ ಗೊಬ್ಬರವನ್ನು ಇಳಿಸುವ ಕಾರ್ಯದಲ್ಲಿ ಸುರೇಶ್ ಮಗ್ನರಾಗಿದ್ದರು. ಈ ವೇಳೆ ಸುರೇಶ್‌ರವರೊಂದಿಗೆ ಬಂದಿದ್ದ ಬಾಲಕ ಕುಶ ಅಲ್ಲೇ ಆಟವಾಡುತ್ತಿದ್ದ. ಕೆಲ ಸಮಯದ ನಂತರ ಯಾರ ಅರಿವಿಗೆ ಬಾರದಂತೆ ಬಾಲಕ ಪಕ್ಕದ ತೋಟಕ್ಕೆ ಆಟವಾಡಲು ಹೋಗಿದ್ದಾನೆ. ಆ ವೇಳೆ ಅಲ್ಲಿದ್ದ ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಗೊಬ್ಬರ ಇಳಿಸುವ ಕೆಲಸ ಮುಗಿದ ತರುವಾಯ ಸುರೇಶ್ ಮತ್ತು ಆತನ ಕುಟುಂಬದವರು ಬಾಲಕ ಕುಶನಿಗಾಗಿ ತೋಟದಲ್ಲಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಕೃಷಿ ಹೊಂಡದ ನೀರಿನಲ್ಲಿ ಬಾಲಕನ ಚಪ್ಪಲಿಗಳು ತೇಲುತ್ತಿರುವುದು ಕಂಡು ಬಂದಿದೆ. ಕೂಡಲೇ ಕೃಷಿ ಹೊಂಡದ ನೀರನ್ನೆಲ್ಲಾ ಮೋಟರ್ ಪಂಪ್ ಮೂಲಕ ಹೊರ ಹಾಕಿದ್ದಾರೆ. ಆಗ ಮಗು ನೀರಿನೊಳಗೆ ಸತ್ತು ಹೋಗಿರುವುದು ಪತ್ತೆಯಾಯಿತು. ಈ ವೇಳೆ ಕುಟುಂಬದವರು, ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ದಂಡಿನಶಿವರ ಪಿಎಸ್‌ಐ ಚಿತ್ತರಂಜನ್ ಭೇಟಿ ನೀಡಿದ್ದರು. ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.